ವೈಭವದ ಮದುವೆಗಳಿಗೆ ಕಡಿವಾಣ ಹಾಕಲು ಹೊರಟಿರುವ ಸಂಸದ ರಂಜೀತ್ ಅವರ ಮದುವೆ ಹೇಗಾಗಿತ್ತು ಗೊತ್ತೇ?
ವಿವರ ನೋಡಿದರೆ ಬೆಚ್ಚಿ ಬೀಳುತ್ತೀರಿ

ಹೊಸದಿಲ್ಲಿ, ಫೆ.19: ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುವ ಸಂಬಂಧ ಖಾಸಗಿ ಮಸೂದೆ ಮಂಡಿಸುವ ಮೂಲಕ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಸುದ್ದಿಯಲ್ಲಿದ್ದಾರೆ. ಆದರೆ ಅವರು ತಮ್ಮ ವಿವಾಹವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅವರು ತಮ್ಮ ವಿವಾಹಕ್ಕಾಗಿ ವಿಮಾನವನ್ನು ಬಾಡಿಗೆಗೆ ಪಡೆದಿದ್ದು, ಅವರ ವಿವಾಹ ಸಮಾರಂಭಕ್ಕೆ ಒಂದು ಲಕ್ಷ ಅತಿಥಿಗಳು ಆಗಮಿಸಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ನ್ಯೂಸ್ 18 ಬಹಿರಂಗಪಡಿಸಿದೆ.
ಸಂಸದೆ ತಮ್ಮ ವಿವಾಹಕ್ಕೆ ಕುಟುಂಬದ ಜತೆ ಜಲಂಧರ್‌ನಿಂದ ಪುರ್ನಿಯೊಗೆ ಬಾಡಿಗೆ ವಿಮಾನದಲ್ಲಿ ಆಗಮಿಸಿದ್ದರು. ಈ ವಿವಾಹ 1994ರಲ್ಲಿ ನಡೆದಿತ್ತು. ವಿವಾಹದ ತಯಾರಿಗಾಗಿ 200 ಎಕರೆ ವಿಶಾಲ ಪ್ರದೇಶದಲ್ಲಿ ಸಿದ್ಧತೆ ಮಾಡಲಾಗಿತ್ತು ಹಾಗೂ ನೂರಾರು ಆನೆ ಮತ್ತು ಕುದುರೆಗಳನ್ನು ಇದಕ್ಕೆ ಬಳಸಿಕೊಳ್ಳಲಾಗಿತ್ತು ಎನ್ನುವುದನ್ನು ವರದಿ ಪ್ರಕಟಿಸಿದೆ.
ಈ ವರದಿ ನಿಜವಾಗಿದ್ದರೆ ಅವರು ಲೋಕಸಭೆಯಲ್ಲಿ ಮಂಡಿಸಿರುವ ಖಾಸಗಿ ಮಸೂದೆಗೆ ಅವರ ನಡವಳಿಕೆ ತದ್ವಿರುದ್ಧವಾಗಲಿದೆ. ಭಾರತೀಯ ವಿವಾಹಗಳಲ್ಲಿನ ವೈಭೋಗ ಮತ್ತು ಅದ್ಧೂರಿತನದ ಬಗ್ಗೆ ಟೀಕಿಸುತ್ತಿರುವ ರಂಜಿತ್ ಈ ಮಸೂದೆಯನ್ನು ಮಂಡಿಸುವ ವೇಳೆ, "ವಿವಾಹಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಆದರೆ ದುರದೃಷ್ಟವಶಾತ್, ಇಂದು ವಿವಾಹವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವ ಮತ್ತು ಶ್ರೀಮಂತಿಕೆಯ ಪ್ರದರ್ಶನಕ್ಕೆ ಅದನ್ನು ವೇದಿಕೆಯಾಗಿ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದಾಗಿ ಬಡವರು ಕೂಡಾ ಅಧಿಕವಾಗಿ ವೆಚ್ಚ ಮಾಡುವಂತಾಗಿದೆ. ಇದನ್ನು ತಡೆಯುವುದು ಅಗತ್ಯ" ಎಂದು ಪ್ರತಿಪಾದಿಸಿದ್ದರು.
ಮದುವೆಗೆ ಮಾಡುವ ವೆಚ್ಚವನ್ನು 5 ಲಕ್ಷಕ್ಕೆ ಮಿತಿಗೊಳಿಸಬೇಕು ಮತ್ತು ಶ್ರೀಮಂತಿಕೆಯ ಪ್ರದರ್ಶನಕ್ಕೆ ಅದು ವೇದಿಕೆಯಾಗಬಾರದು ಎಂದು ಆಗ್ರಹಿಸಿದ್ದಾರೆ. 5ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡಿದಲ್ಲಿ, ಹೆಚ್ಚುವರಿ ಮೊತ್ತದ ಶೇಕಡ 10ರಷ್ಟನ್ನು ಬಡಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ದೇಣಿಗೆಯಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ