ಆಸ್ಟ್ರೇಲಿಯ ವಿರುದ್ಧ ಶ್ರೇಯಸ್ ಅಜೇಯ ದ್ವಿಶತಕ
ಅಭ್ಯಾಸ ಪಂದ್ಯ: ಭಾರತ ‘ಎ’ 403 ರನ್‌ಗೆ ಆಲೌಟ್

ಮುಂಬೈ, ಫೆ.19: ಆಸ್ಟ್ರೇಲಿಯ ವಿರುದ್ಧ ಇಲ್ಲಿ ನಡೆಯುತ್ತಿರುವ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಜೇಯ ದ್ವಿಶತಕದ ನೆರವಿನಿಂದ ಭಾರತ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 403 ರನ್ ಗಳಿಸಿ ಆಲೌಟಾಗಿದೆ.
ಮುಂಬೈ ಆಟಗಾರ ಶ್ರೇಯಸ್ ಮೂರನೆ ಹಾಗೂ ಅಂತಿಮ ದಿನದಾಟವಾದ ರವಿವಾರ ಅಜೇಯ 85 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದರು. ಶ್ರೇಯಸ್ 210 ಎಸೆತಗಳಲ್ಲಿ 27 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 202 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡಿದರು. ಈ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ.
ಭಾರತ ‘ಎ’ ತಂಡ 91.5 ಓವರ್‌ಗಳಲ್ಲಿ 403 ರನ್‌ಗೆ ಆಲೌಟಾಯಿತು. ಆಸ್ಟ್ರೇಲಿಯ ಕೇವಲ 66 ರನ್ ಮುನ್ನಡೆ ಪಡೆಯಿತು.
ಶ್ರೇಯಸ್ ಹಾಗೂ ಗೌತಮ್(74 ರನ್, 68 ಎಸೆತ, 10 ಬೌಂಡರಿ, 4 ಸಿಕ್ಸರ್) 7ನೆ ವಿಕೆಟ್‌ಗೆ 138 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ನಾಯಕ ಸ್ಮಿತ್ ಹಾಗೂ ಶಾನ್ ಮಾರ್ಷ್ ಶತಕದ ಸಹಾಯದಿಂದ ಮೊದಲ ಇನಿಂಗ್ಸ್‌ನಲ್ಲಿ 469 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.







