ಕೇರಳದಲ್ಲಿ ಕಲಬೆರಕೆ ಜಾಲದ ಹೆಡೆಮುರಿ ಕಟ್ಟಿದ ದಿಟ್ಟೆ
ಐಎಎಸ್ ಅಧಿಕಾರಿಯ ’ಅನುಪಮ’ ಸೇವೆ

ತಿರುವನಂತಪುರ,ಫೆ.19: ಈ ಮಹಿಳಾ ಐಎಎಸ್ ಅಧಿಕಾರಿಯ ಹೆಸರು ಕೇಳಿದರೆ ಅಪರಾಧಿಗಳು ಥರ ಥರ ನಡುಗುತ್ತಾರೆ. 2010ನೇ ಬ್ಯಾಚ್‌ನಲ್ಲಿ ನಾಲ್ಕನೆ ರ್ಯಾಂಕ್ ಪಡೆದು ಆಯ್ಕೆಯಾದ ಇವರು ಎಲ್ಲ ಸರಕಾರಿ ಅಧಿಕಾರಿಗಳಿಗೆ ಮಾದರಿ. ಪ್ರಾಮಾಣಿಕತೆ ಮತ್ತು ದಿಟ್ಟತನದಿಂದ ಪುರುಷ ಅಧಿಕಾರಿಗಳಿಗೆ ತಾವೇನೂ ಕಡಿಮೆಯಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಕೇರಳದಲ್ಲಿ ಕಲಬೆರಕೆ ದಂಧೆಯನ್ನು ಮಟ್ಟಹಾಕಿದ್ದು ಮಾತ್ರವಲ್ಲದೇ ಅಪರಾಧಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದು ಇವರ ಹೆಗ್ಗಳಿಕೆ.
ಈ ದಿಟ್ಟ ಅಧಿಕಾರಿಯ ಹೆಸರು ಟಿ.ವಿ.ಅನುಪಮ. ಕೇರಳದ ಆಹಾರ ಸುರಕ್ಷೆ ವಿಭಾಗದ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಹೆಸರಾದ ಇವರು, ಅಕ್ರಮ ಕಲಬೆರಕೆ ದಂಧೆಯಲ್ಲಿ ತೊಡಗಿದವರಿಗೆ ಸಿಂಹಸ್ವಪ್ನ. ಏಕಕಾಲಕ್ಕೆ ವಿವಿಧೆಡೆ ದಾಳಿ ನಡೆಸಿ ಈ ದಂಧೆಯನ್ನು ಮಟ್ಟಹಾಕಿದ್ದಾರೆ.
ಸಿಕ್ಕಿಬೀಳುವ ಭಯ ಹಾಗೂ ಕಾನೂನು ಕ್ರಮದ ಭೀತಿಯಿಂದಾಗಿ ಕಲಬೆರಕೆ ದಂಧೆಯಲ್ಲಿ ತೊಡಗಿದ್ದವರು ತಮ್ಮ ದಂಧೆಯನ್ನು ಸ್ಥಗಿತಗೊಳಿಸಿದ್ದಾರೆ. ಕಳೆದ 15 ತಿಂಗಳಲ್ಲಿ 6000 ಕಲಬೆರಕೆ ಆಹಾರ ಮಾದರಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಇವರು, 750ಕ್ಕೂ ಹೆಚ್ಚು ಮಂದಿಯ ವಿರುದ್ಧ ಆಹಾರ ಕಲಬೆರಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ದೇಶದಲ್ಲೇ ಅತ್ಯಂತ ಕಠಿಣ ಹಾಗೂ ದಿಟ್ಟ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಲವು ಮಾರುಕಟ್ಟೆಗಳ ಮೇಲೆ ಇವರು ದಾಳಿ ನಡೆಸಿದ ವೇಳೆ, ಶೇಕಡ 300ರಷ್ಟು ಕೀಟನಾಶಕಗಳಿರುವ ಮಾದರಿಯನ್ನೂ ಪತ್ತೆಹಚ್ಚಿದ್ದಾರೆ. ಜನ ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಸಿಕೊಳ್ಳಲು ಅನುಪಮ ಉತ್ತೇಜನ ನೀಡಿ, ಇದಕ್ಕಾಗಿಯೇ ಪ್ರಚಾರಾಂದೋಲನವನ್ನೂ ಕೈಗೊಂಡಿದ್ದಾರೆ. ಸರಕಾರವೂ ಇದಕ್ಕೆ ಪ್ರೋತ್ಸಾಹ ನೀಡಿ ಆಂದೋಲನ ಯಶಸ್ವಿಯಾಯಿತು. ಈ ಮೊದಲು ಕೇರಳಕ್ಕೆ ಅಗತ್ಯವಾಗಿದ್ದ ಶೇಕಡ 70ರಷ್ಟು ತರಕಾರಿ ಕರ್ನಾಟಕ ಹಾಗೂ ತಮಿಳುನಾಡಿನಿಂದ ಬರುತ್ತಿತ್ತು. ಇದೀಗ ಶೇಕಡ 70ರಷ್ಟನ್ನು ಕೇರಳಿಗರೇ ಬೆಳೆಯುತ್ತಿದ್ದಾರೆ.
ಕೃಪೆ: https://www.kenfolios.com







