ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿಗರಿಗೆ ನೈತಿಕ ಹಕ್ಕಿಲ್ಲ: ಐವನ್ ಡಿಸೋಜ

ಮಂಗಳೂರು, ಫೆ.19: ರಾಜ್ಯ ಸರಕಾರದ ವಿರುದ್ಧ ಬಜೆಪಿ ಫೆ.20 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಆದರೆ, ಭ್ರಷ್ಟಾಚಾರದ ವಿರುದ್ದ ಪ್ರತಿಭಟನೆ ನಡೆಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗು ಕಾಂಗ್ರೆಸ್ ವಕ್ತಾರ ಐವನ್ ಡಿಸೋಜ ಹೇಳಿದರು.
ರವಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭ್ರಷ್ಟಾಚಾರ ಎಸಗಿದ್ದಕ್ಕಾಗಿಯೇ ಯಡಿಯೂರಪ್ಪ ಜೈಲು ಸೇರಿದ್ದನ್ನು ಬಿಜೆಪಿ ಮರೆತಿರಬಹುದು. ಆದರೆ, ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಚುನಾವಣೆ ಸಂದರ್ಭ ಜನರನ್ನು ದಾರಿತಪ್ಪಿಸುವ ಸಲುವಾಗಿ ಬಿಜೆಪಿ ಇಂತಹ ಗೊಂದಲ ಸೃಷ್ಟಿಸುತ್ತಿದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ, ಬಿಜೆಪಿಗರ ನಾಳಿನ ಪ್ರತಿಭಟನೆಗೆ ಅರ್ಥವಿಲ್ಲ. ರಾಜ್ಯ ಸರಕಾರದ ಅಭಿವೃದ್ಧಿ ವಿಚಾರದಲ್ಲಿ ದೋಷವಾಗಿದ್ದರೆ ಅದನ್ನು ಬಿಜೆಪಿ ಪ್ರಶ್ನಿಸಲಿ. ಅದು ಬಿಟ್ಟು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗರಿಗಿಲ್ಲ. ಸಚಿವರೊಬ್ಬರ ಮನೆಗೆ ಐಟಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯೇ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯ ಮೂಲಕ ಮಾಹಿತಿ ಕೇಳಿದ್ದರು. ಆದರೆ ಐಟಿ ಇಲಾಖೆಯು ಸದ್ಯ ಅದರ ದಾಖಲೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ತನಿಖೆಯ ಬಳಿಕ ನೀಡಲಾಗುವುದು ಎಂದು ತಿಳಿಸಿದೆ. ಅದನ್ನೂ ಮುಖ್ಯಮಂತ್ರಿ ಈಗಾಗಲೆ ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಬಿಜೆಪಿ ಭ್ರಷ್ಟಾಚಾರದ ವಿಚಾರದಲ್ಲಿ ಗುಲ್ಲೆಬ್ಬಿಸುತ್ತಿದೆ, ರಾಜ್ಯ ಸರಕಾರದ ವಿರುದ್ಧ ವ್ಯವಸ್ಥಿತ ಸಂಚು ನಡೆಸುತ್ತಿದೆ ಎಂದು ಆಪಾದಿಸಿದರು.
ಹೈಕಮಾಂಡ್‌ಗೆ ಕಪ್ಪ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಡೆದ ಮಾತುಕತೆಯ ಸಿಡಿಯ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಮಲ್ಲೇಶ್ವಪುರಂ ಠಾಣೆಗೆ ದೂರು ನೀಡಲಾಗಿದೆ ಎಂದು ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸತೀಶ್ ಪೆಂಗಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.







