27 ವರ್ಷಗಳ ಬಳಿಕ ಹೋಳಿ ಸಂಭ್ರಮಕ್ಕೆ ಸಜ್ಜಾಗಿರುವ ರುಡಾಯನ್ ದಲಿತರು

ದತ್ತಾರಾಮನ ಬಂಧುಗಳು
ಲಕ್ನೋ,ಫೆ.19: 27 ವರ್ಷಗಳ ಹಿಂದೆ, 1990ರ ಮಾ.11ರಂದು ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ರುಡಾಯನ್ ಗ್ರಾಮದಲ್ಲಿ ಘನಘೋರ ದುರಂತವೊಂದು ನಡೆದುಹೋಗಿತ್ತು. ಅಂದು ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದಲಿತ ವ್ಯಕ್ತಿಯೋರ್ವ ಮೇಲ್ಜಾತಿಯ ವ್ಯಕ್ತಿಗೆ ಬಣ್ಣವನ್ನು ಹಚ್ಚಿದ್ದ. ಈ ‘ತಪ್ಪು’ ಆತನಿಗೆ ತುಂಬ ದುಬಾರಿಯಾಗಿ ಪರಿಣಮಿಸಿತ್ತು, ಜೊತೆಗೆ ಇತರ ದಲಿತರ ವಿನಾಶಕ್ಕೂ ಕಾರಣವಾಗಿತ್ತು. ದತ್ತಾ ರಾಮನನ್ನು ಸಜೀವ ದಹನಗೊಳಿಸಿದ ಸವರ್ಣೀಯರ ಗುಂಪು ಗ್ರಾಮದಲ್ಲಿಯ 42 ದಲಿತರ ಮನೆಗಳಿಗೆ ಬೆಂಕಿ ಹಚ್ಚಿ ಭಸ್ಮಗೊಳಿಸಿತ್ತು. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ದಲಿತರು ಮತ್ತೆಂದೂ ಹೋಳಿ ಹಬ್ಬವನ್ನಾಚರಿಸುವ ಧೈರ್ಯ ಮಾಡಿರಲಿಲ್ಲ.
ಆದರೆ ಈ ವರ್ಷ ದೇಶದ ಇತರೆಡೆಗಳಂತೆ ರುಡಾಯನ್ ಗ್ರಾಮದ ದಲಿತರೂ ಹೋಳಿ ಸಂಭ್ರಮವನ್ನಾಚರಿಸಲಿದ್ದಾರೆ.
ದಲಿತರು ಸಂಭ್ರಮ ಪಡಲು ಕಾರಣವಿದೆ. 2017,ಫೆ.15ರಂದು 27 ವರ್ಷಗಳ ಹಿಂದಿನ ದುರಂತ ಪ್ರಕರಣದ ತೀರ್ಪು ನೀಡಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮುಖ್ಯ ಆರೋಪಿ ಕುಂವರ್ ಪಾಲ್ಗೆ ಮರಣ ದಂಡನೆಯನ್ನು ಮತ್ತು ಇತರ 13 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ. ಹೋಳಿಯನ್ನು ಆಚರಿಸುವ ಮೂಲಕ ದಲಿತರು ತೀರ್ಪನ್ನು ಸಂಭ್ರಮಿಸಲಿದ್ದಾರೆ. ಯಾವುದೇ ಪ್ರತೀಕಾರದ ಭೀತಿಯಿಲ್ಲದೆ ಮುಕ್ತವಾಗಿ ಹೋಳಿಯನ್ನಾಚರಿಸಲು ತಮಗೆ ರಕ್ಷಣೆ ಒದಗಿಸುವಂತೆ ಜಿಲ್ಲಾಡಳಿತವನ್ನು ಅವರು ಕೋರಿಕೊಂಡಿದ್ದಾರೆ.
ಕಳೆದ 27 ವರ್ಷಗಳಿಂದಲೂ ನಾವು ಹೋಳಿ ಅಥವಾ ದೀಪಾವಳಿಯನ್ನು ಆಚರಿಸಿಲ್ಲ. ಆದರೆ ನ್ಯಾಯಾಲಯದ ತೀರ್ಪಿನ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ಮರಳಿದೆ ಎಂದು ಅಂದು ಕೊಲೆಯಾಗಿದ್ದ ದತ್ತಾರಾಮನ ಸೋದರ ಹರಿಶಂಕರ್ ಹೇಳಿದರು.
ಸಾಸ್ನಿ ಪಟ್ಟಣದಿಂದ ಕೇವಲ ಎರಡು ಕಿ.ಮೀ.ಅಂತರದಲ್ಲಿರುವ 5,000 ಜನಸಂಖ್ಯೆಯ ರುಡಾಯನ್ ಗ್ರಾಮವು ಮೂರು ಸರಕಾರಿ ಶಾಲೆಗಳು, ವಿದ್ಯುತ್ ಪೂರೈಕೆ, ರಸ್ತೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊಂದಿದೆ. ಆದರೆ ಇಂದಿಗೂ ಜಾತಿ ಉದ್ವಿಗ್ನತೆ ಇಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಮಾರ್ಚ್ 1990ರ ಆ ಘಟನೆ ಗ್ರಾಮದ ಸಾಮಾಜಿಕ ಬಂಧವನ್ನೇ ನುಚ್ಚುನೂರಾಗಿಸಿದೆ. ಆದರೂ ಕಾಲವು ಸರಿದಂತೆ ಮೇಲ್ಜಾತಿಗಳು ಮತ್ತು ದಲಿತರ ನಡುವಿನ ವೈಷಮ್ಯ ನಿಧಾನವಾಗಿ ಮಸುಕಾಗತೊಡಗಿತ್ತು. ಆದರೆ ಈಗ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಮತ್ತೆ ಉದ್ವಿಗ್ನತೆ ಪ್ರಕಟಗೊಂಡಿದೆ.
ತಮ್ಮ ಗ್ರಾಮದಲ್ಲಿ ನೆಲೆಸಿರುವ ಸ್ವಲ್ಪ ಮಟ್ಟಿಗಿನ ಶಾಂತಿಯನ್ನು ಕದಡುವಂತಹ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ದಲಿತರು ಮೌನವಾಗಿ ಪ್ರಾರ್ಥಿಸುತ್ತಿದ್ದಾರೆ.
ಫ್ಲಾಷ್ಬ್ಯಾಕ್
1990,ಮಾರ್ಚ್ನ ಘೋರ ಘಟನೆಯ ಬಳಿಕ ಬಿಎಸ್ಪಿ ನಾಯಕಿ ಮಾಯಾವತಿ ಗ್ರಾಮಕ್ಕೆ ಆಗಮಿಸಿ ಧರಣಿ ಮುಷ್ಕರ ನಡೆಸಿದ್ದರು. ಆ ವೇಳೆ ಜಾತಿ ರಾಜಕೀಯ ಉತ್ತುಂಗದಲ್ಲಿತ್ತು. ಮಾಯವತಿಯವರ ಮಧ್ಯಪ್ರವೇಶದಿಂದಾಗಿ ಘಟನೆಯು ಸರಕಾರದ ಗಮನವನ್ನು ಸೆಳೆದಿತ್ತು ಮತ್ತು ದಲಿತರಿಗಾಗಿದ್ದ ಅನ್ಯಾಯದ ವಿರುದ್ಧ ಕ್ರಮವು ಚುರುಕು ಪಡೆದುಕೊಂಡಿತ್ತು. ಆದರೆ ಮಾಯಾವತಿ ಖುದ್ದು ಉ.ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಸಂತ್ರಸ್ತ ಕುಟುಂಬಗಳಿಗೆ ಅವರು ಯಾವುದೇ ನೆರವು...ವಿಶೇಷವಾಗಿ ಹಣಕಾಸು ನೆರವನ್ನು ಒದಗಿಸಿರಲಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು.
ದಲಿತರೆಲ್ಲ ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದರಿಂದ ಕಾನೂನು ಹೋರಾಟವೂ ಕಷ್ಟವಾಗಿತ್ತು. ಆದರೂ ವಂತಿಗೆ ಮೂಲಕ ಹಣ ಸಂಗ್ರಹಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದರು.
ಪರಿಹಾರದ ಕುರಿತು ಹೇಳಬೇಕೆಂದರೆ ದತ್ತಾರಾಮ ಕುಟುಂಬಕ್ಕೆ ಕೇವಲ 1,0000 ರೂ.ಪರಿಹಾರ ದೊರಕಿದ್ದರೆ, ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಜುಜುಬಿ 2000 ರೂ.ಪರಿಹಾರ ನೀಡಲಾಗಿತ್ತು.
ನ್ಯಾಯಾಲಯದ ತೀರ್ಪಿನಿಂದ ದಲಿತರಿಗೆ ಹರ್ಷವುಂಟಾಗಿದೆಯಾದರೂ ಮೇಲ್ಜಾತಿ ಗಳಿಂದ ಸಂಭಾವ್ಯ ಪ್ರತೀಕಾರದ ಭೀತಿ ಅವರನ್ನು ಕಾಡುತ್ತಿದೆ. ಜೊತೆಗೆ ಕಾನೂನು ಸಮರ ಉಚ್ಚ ನ್ಯಾಯಾಲಯದ ಮೆಟ್ಟಿಲುಗಳನ್ನೇರುವ ಆತಂಕವೂ ಅವರಲ್ಲಿದೆ.
ಆರೋಪ ನಿರಾಕರಿಸಿದ ಮುಖ್ಯ ಆರೋಪಿಯ ಪತ್ನಿ
ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಏಕೈಕ ಆರೋಪಿ ಕುಂವರ್ ಪಾಲ್ನ ಪತ್ನಿ ಸರೋಜಾ ದೇವಿ ತನ್ನ ಪತಿ ಅಮಾಯಕ ಎಂದು ಪ್ರತಿಪಾದಿಸಿದ್ದಾಳೆ. ಪೊಲೀಸರು ಅವರ ಮೇಲೆ ತಪ್ಪಾಗಿ ಆರೋಪ ಹೊರಿಸಿದ್ದಾರೆ. ನಿಜವಾಗಿ ಮನೆಗಳಿಗೆ ಬೆಂಕಿ ಹಚ್ಚಿದವರು ಮತ್ತು ಕೊಲೆ ಮಾಡಿದವರು ಸುರಕ್ಷಿತವಾಗಿದ್ದಾರೆ. ತನ್ನ ಪತಿ ಸುದೀರ್ಘ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರಿಗೆ ನಡೆದಾಡಲೂ ಆಗುವುದಿಲ್ಲ ಎಂದು ಆಕೆ ಹೇಳಿದಳು.







