ಮೂಡುಬಿದಿರೆ: ರೋಟರಿಯಿಂದ ಸಾಧಕರಿಗೆ ಸನ್ಮಾನ

ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್ ವತಿಯಿಂದ ಮೂರು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಕೀರ್ತಿನಗರದ ಸಾರಾದಲ್ಲಿ ರೋಟರಿ ಟೆಂಪಲ್ ಟೌನ್‌ನ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಡಿ ಕೊಡ ಮಾಡುವ ಜೀವರಕ್ಷಕ ಪ್ರಶಸ್ತಿಯನ್ನು ಪಡೆದ ಸಿ.ಎಚ್.ಅಬ್ದುಲ್ ಗಫೂರ್, ಮಂಗಳೂರು ವಿವಿಯು ನಡೆಸಿದ ಪದವಿ ಪರೀಕ್ಷೆಯಲ್ಲಿ ಬಿಎಯಲ್ಲಿ 4ನೇ ರ್ಯಾಂಕ್ ಗಳಿಸಿದ ಬೆಸೆಂಟ್ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಡಿಕುನ್ಹಾ ತಾಕೋಡೆ ಹಾಗೂ ಬಿಕಾಂನಲ್ಲಿ 4ನೇ ರ್ಯಾಂಕ್ ಗಳಿಸಿದ ಮಹಾವೀರ ಕಾಲೇಜಿನ ವಿದ್ಯಾರ್ಥಿ ವಾಸುದೇವ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಕೃತಿ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್, ಡಾ ಹರೀಶ್ ನಾಯಕ್, ರೋಟರಿ ಕ್ಲಬ್ ಟೆಂಪಲ್ ಟೌನ್‌ನ ಮಾಜಿ ಅಧ್ಯಕ್ಷ ಉಮೇಶ್ ರಾವ್, ಕಾರ್ಯದರ್ಶಿ ಹರೀಶ್, ರೋಟರಿ ಟೆಂಪಲ್ ಟೌನ್‌ನ 2017-18ರ ಸಾಲಿನ ಅಧ್ಯಕ್ಷ ಬಲರಾಮ್ ಭಟ್ ಆ್ಯನ್ಸ್ ಕ್ಲಬ್‌ನ ಅಧ್ಯಕ್ಷೆ ಸಾರಿಕಾ ರಾಜೇಶ್ ಬಂಗೇರ, ಕಾರ್ಯದರ್ಶಿ ಸರಿತಾ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ವಿಸ್ಮಯ ವಿನಾಯಕರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.







