ಗಾಂಜಾ ವ್ಯಾಪಾರಿಗಳಿಂದ ಟಿವಿ ವರದಿಗಾರನಿಗೆ ಚೂರಿ ಇರಿತ

ಮದುರೈ,ಫೆ.19: ಮದುರೈನಲ್ಲಿ ಗಾಂಜಾ ಮಾರಾಟಗಾರರ ಗುಂಪೊಂದು ರವಿವಾರ ಟಿವಿ ಪತ್ರಕರ್ತರೋರ್ವರನ್ನು ಚೂರಿಯಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದೆ.
ಪಾಲಿಮರ್ ಟಿವಿಯ ವರದಿಗಾರ ಚಂದನ್(50) ಇಂದು ಬೆಳಿಗ್ಗೆ ಇಲ್ಲಿಯ ಪಿ ಆ್ಯಂಡ್ ಟಿ ನಗರದ ತನ್ನ ನಿವಾಸದ ಬಳಿಯ ಅಂಗಡಿಗೆ ಹಾಲು ತರಲೆಂದು ಹೋಗಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಿದ ನಾಲ್ವರ ಗುಂಪು ಚೂರಿಗಳಿಂದ ಭುಜ,ಹೊಟ್ಟೆ ಮತ್ತು ಕಾಲಿಗೆ ಇರಿದಿದೆ. ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಚಂದನ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಚಂದನ್ ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಗಾಂಜಾ ಮಾರಾಟಗಾರರು ಭಾವಿಸಿದ್ದು ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ಇದೇ ಕಾರಣದಿಂದ ಆರೋಪಿಗಳು ವರ್ಷದ ಹಿಂದೆ ಅವರ ಪುತ್ರನ ಮೇಲೂ ಹಲ್ಲೆ ನಡೆಸಿದ್ದರು.
ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
Next Story





