ತೀರ್ಪು ಬಂದಾಕ್ಷಣ ಮೂಡುಬಿದಿರೆಯಲ್ಲಿ ಮೊದಲ ಕಂಬಳ : ಶಾಂತರಾಮ ಶೆಟ್ಟಿ
ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯಿಂದ ನಿರ್ಣಯ

ಮೂಡುಬಿದಿರೆ, ಫೆ.19: ಪ್ರಸ್ತುತ ಅಧಿವೇಶನದಲ್ಲಿ ರಾಜ್ಯ ಸರಕಾರ ಮಂಡಿಸಿದ ಕಂಬಳ ಕಾನೂನು ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದ ಕೂಡಲೇ ಮೊದಲ ಕಂಬಳವನ್ನು ಮೂಡುಬಿದಿರೆಯಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ.
ಈ ವಾರದಲ್ಲಿ ಕಂಬಳ ಪರ ತೀರ್ಪು ಬರುವ ಸಾಧ್ಯತೆಗಳಿದ್ದು, ನಮ್ಮ ಶ್ರೇಷ್ಠ ಪರಂಪರೆಯ ನಿರಾತಂಕವಾಗಿ ಮುಂದುವರಿಯುವ ಭರವಸೆ ಇದೆ. ಮುಂದಿನ ದಿನಗಳಲ್ಲಿ ವೇಣೂರು, ಮೀಯಾರು, ಉಪ್ಪಿನಂಗಡಿ, ನಂದಿಕೂರು, ಬಂಗಾಡಿ ಕೊಲ್ಲಿ, ಐಕಳ ಕಂಬಳವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸರ್ವ ತಯಾರಿ ನಡೆದಿದೆ ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ ತಿಳಿಸಿದರು.
ಮೂಡುಬಿದಿರೆಯ ಸಮಾಜಮಂದಿರದಲ್ಲಿ ರವಿವಾರ ಸಂಜೆ ನಡೆದ ಕಂಬಳ ಸಮಿತಿಯ ವ್ಯವಸ್ಥಾಪಕರು, ಪದಾಧಿಕಾರಿಗಳು, ಕೋಣಗಳ ಯಜಮಾನರು, ಓಟಗಾರರು ಹಾಗೂ ಕಂಬಳ ಆಸಕ್ತರ ತುರ್ತು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೀರಿನ ಲಭ್ಯತೆ ಪರಿಗಣಿಸಿ ಎಲ್ಲೆಲ್ಲಿ ಕಂಬಳವನ್ನು ಆಯೋಜಿಸಬಹುದೆಂದು ನಿರ್ಣಯ ತೆಗೆದುಕೊಳ್ಳಲಾಗುವುದು. ಲೇಸರ್ ಹಾಗೂ ತಂತ್ರಜ್ಞಾನಗಳನ್ನು ಕೂಡ ಸಮರ್ಪಕವಾಗಿ ಬಳಸಲಾಗುವುದು. ಕಂಬಳದ ಉಳಿವಿನ ದೃಷ್ಠಿಯಿಂದ ಶಿಸ್ತುಬದ್ಧವಾಗಿ, ಕೋಣಗಳಿಗೆ ಹಿಂಸೆ ನೀಡದೆ ಆಯೋಜಿಸುವಂತಾಗಬೇಕು. ಗಂತು, ಮಂಜೊಟ್ಟಿ ಹಾಗೂ ಹೊರ ಭಾಗದಲ್ಲಿ ಕೋಣಗಳಿಗೆ ಹೊಡೆಯಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿನಂತಿಸಿದರು.
‘ಬುಲ್' ಎನ್ನುವ ಶಬ್ದವನ್ನು ವಿಧೇಯಕದಲ್ಲಿ ಉಲ್ಲೇಖಿಸಲಾಗಿದ್ದು, ಆ ಶಬ್ಧ ಪ್ರಯೋಗವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಪೇಟಾದವರು ಪುನರಪಿ ನ್ಯಾಯಾಲಯದ ಮೆಟ್ಟಲು ಹತ್ತಿ ಕಂಬಳಕ್ಕೆ ಅಡ್ಡಿಪಡಿಸುವ ಸಂಭವನೀಯತೆಯ ಬಗ್ಗೆ ಚರ್ಚೆ ನಡೆಯಿತು.
ಉಭಯ ಸದನಗಳಲ್ಲಿ ವಿಧೇಯಕಕ್ಕೆ ಪೂರಕವಾಗಿ ಅವಕಾಶ ಕಲ್ಪಿಸಿದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕೋಶಾಧಿಕಾರಿ ಪಿ.ಆರ್. ಶೆಟ್ಟಿ, ಉಪಾಧ್ಯಕ್ಷ ಕೇಶವ ಭಂಡಾರಿ, ಬೈಂದೂರು ವಲಯದ ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.







