ಉ.ಪ್ರದೇಶದಲ್ಲಿ ‘ಗೂಂಡಾ ರಾಜ್ ’ನಡೆಯುತ್ತಿದೆ: ಮೋದಿ

ಫತೇಪುರ,ಫೆ.19: ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಎಸ್‌ಪಿ ಸರಕಾರದ ವಿರುದ್ಧ ರವಿವಾರ ತೀವ್ರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ‘ಗೂಂಡಾ ರಾಜ್’ ನಡೆಯುತ್ತಿದ್ದು, ಪೊಲೀಸ್ ಠಾಣೆಗಳೆಲ್ಲ ಸಮಾಜವಾದಿ ಪಕ್ಷದ ಕಚೇರಿಗಳಾಗಿವೆ. ಸಚಿವ ಗಾಯತ್ರಿ ಪ್ರಸಾದ ಪ್ರಜಾಪತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವತಾಗಲು ಖುದ್ದು ಸರ್ವೋಚ್ಚ ನ್ಯಾಯಾಲಯವೇ ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಹೇಳಿದರು.
ಗಾಯತ್ರಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಮತ್ತು ತನ್ನ ಅಪ್ರಾಪ್ತ ವಯಸ್ಕ ಪುತ್ರಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದರು ಎಂದು ಆರೋಪಿಸಿ ಮಹಿಳೆಯೋರ್ವಳು ಉ.ಪ್ರದೇಶ ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದ ಪರಿಣಾಮ ಪೊಲೀಸರು ಶನಿವಾರ ಪ್ರಜಾಪತಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಉ.ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ರ ಮುಖದಿಂದ ಹೊಳಪು ಮರೆಯಾಗಿದೆ. ಅವರ ಧ್ವನಿಯು ಉಡುಗಿದೆ. ಅವರು ಹೆದರಿಕೊಂಡಿದ್ದಾರೆ ಮತ್ತ ಮಾಧ್ಯಮಗಳೊಂದಿಗೆ ಮಾತನಾಡುವಾಗ ಶಬ್ದಗಳಿಗಾಗಿ ತಡಕಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲನ್ನು ಈಗಾಗಲೇ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಎಸ್‌ಪಿ ಕನಿಷ್ಠ ಕಾಳಜಿಯನ್ನೂ ವಹಿಸಿಲ್ಲ ಎಂದ ಅವರು, ತಮಗೆ ಸುರಕ್ಷತೆಯನ್ನು ಖಚಿತ ಪಡಿಸುವ ಸರಕಾರವನ್ನು ಆಯ್ಕೆ ಮಾಡುವಂತೆ ರಾಜ್ಯದ ಜನತೆಯನ್ನು ಆಗ್ರಹಿಸಿದರು.
ಪ್ರತಿಷ್ಠಿತ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಜಾಪತಿ ಪರ ಅಖಿಲೇಶ್ ರ್ಯಾಲಿಯನ್ನು ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್-ಎಸ್‌ಪಿ ಮೈತ್ರಿ ಗಾಯತ್ರಿಯಂತೆ ಪವಿತ್ರವೇ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಎಸ್‌ಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಮಾಜವಾದಿ ನಾಯಕ ರಾಮ ಮನೋಹರ ಲೊಹಿಯಾ ಅವರನ್ನು ಅವಮಾನಿಸಿದೆ ಎಂದು ಅವರು ಕುಟುಕಿದರು.







