ಸಿಂಹಕ್ಕೆ ಮುತ್ತಿಡಲು ಯತ್ನಿಸಿದ ಜಡೇಜ!

ರಾಜ್‌ಕೋಟ್,ಫೆ.19: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ಭಯರಹಿತ ಕ್ರಿಕೆಟ್ ಆಡುವುದರಲ್ಲಿ ನಿಪುಣರು. ಜಡೇಜ ಅತ್ಯುತ್ತಮ ಫೀಲ್ಡರ್, ಆಕ್ರಮಣಕಾರಿ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಪಡೆಯುವುದರಲ್ಲಿ ಎತ್ತಿದ ಕೈ. ಆದರೆ, ಅವರು ಕ್ರಿಕೆಟ್ ಅಂಗಳದಲ್ಲಿ ಮಾತ್ರವಲ್ಲ ಹೊರಗಡೆಯೂ ಭಯರಹಿತ ವ್ಯಕ್ತಿ ಎಂದು ತೋರಿಸಲು ಮುಂದಾಗಿದ್ದಾರೆ.
ಭಾರತೀಯ ಕ್ರಿಕೆಟ್‌ನ ‘ರಾಕ್‌ಸ್ಟಾರ್’ ಜಡೇಜ ರವಿವಾರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರನ್ನು ಬೆಚ್ಚಿಬೀಳಿಸುವ ಚಿತ್ರವೊಂದನ್ನು ಹಾಕಿದ್ದಾರೆ.
ಸಹ ಆಟಗಾರರಿಂದ ‘ಸರ್ ಜಡೇಜ’ ಎಂದೇ ಕರೆಯಲ್ಪಡುವ ಜಡೇಜ ಬೋನಿನೊಳಗಿರುವ ಸಿಂಹಕ್ಕೆ ಮುತ್ತಿಡಲು ಯತ್ನಿಸುವ ಫೋಟೊವನ್ನು ಹಾಕಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ.
ಈ ಚಿತ್ರ ಜಡೇಜ ಅಭಿಮಾನಿಗಳಿಗೆ ನೋಡಲು ಇಷ್ಟವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಸಾಹಸ ಚಿತ್ರ ಪ್ರಕಟಿಸಿದ್ದಕ್ಕಾಗಿ ಯಾವ ರೀತಿಯ ಪ್ರತಿಕ್ರಿಯೆ ಎದುರಿಸಲಿದ್ದಾರೆ ಎಂದು ಕಾದುನೋಡಬೇಕಾಗಿದೆ.
ಜಡೇಜ ಕಳೆದ ವರ್ಷ ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳೊಂದಿಗಿರುವ ಪೋಟೊವನ್ನು ಪ್ರಕಟಿಸಿ ಸಮಸ್ಯೆಗೆ ಸಿಲುಕಿದ್ದರು. ಆಸ್ಟ್ರೇಲಿಯ ವಿರುದ್ಧ ಅತ್ಯಂತ ಮುಖ್ಯ ಟೆಸ್ಟ್ ಸರಣಿ ಆರಂಭವಾಗಲು ಕೆಲವೇ ದಿನಗಳಿರುವಾಗ ಜಡೇಜ ಯಾವುದೇ ಸಮಸ್ಯೆಗೆ ಸಿಲುಕದಿರುವ ವಿಶ್ವಾಸದಲ್ಲಿದ್ದಾರೆ.







