ಬಂಟ್ವಾಳ: ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಬಂಟ್ವಾಳ, ಫೆ. 19: ಎರಡು ದಿನಗಳ ಹಿಂದೆ ಕೊಳ್ನಾಡು ಗ್ರಾಮ ಸಾಲೆತ್ತೂರು ನಾಟೆಕಲ್ಲಿನಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಶವ ನೇತ್ರಾವತಿ ನದಿ ಪಾಣೆಮಂಗಳೂರು ಕಾಂಕ್ರಿಟ್ ಸೇತುವೆ ಅಡಿ ಗೂಡಿನಬಳಿ ಪ್ರದೇಶದಲ್ಲಿ ರವಿವಾರ ಸಂಜೆ ಪತ್ತೆಯಾಗಿದೆ.
ಮೃತರು ಬೀಡಿ ಚಕ್ಕರಾಗಿ ಕೆಲಸ ಮಾಡುತ್ತಿದ್ದು ನಾಟೆಕಲ್ಲು ನಿವಾಸಿ ಉಮರಬ್ಬ(56) ಎಂದು ಗುರುತಿಸಲಾಗಿದೆ.
ಫೆ. 17ರಂದು ಔಷಧಿ ತರಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅವರು ಬಳಿಕ ಕಾಣೆಯಾಗಿದ್ದರು. ವಿಟ್ಲ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು.
ನದಿಗೆ ಹಾರಿದ ಸ್ಥಳದಲ್ಲಿ ಅವರ ಅಂಗಿ ಲುಂಗಿ ಚಪ್ಪಲಿ ಇದ್ದು ಅಂಗಿಯಲ್ಲಿ ಇದ್ದಂತಹ ಗುರುತಿನ ಆಧಾರದ ಮಾಹಿತಿಯಿಂತೆ ಗುರುತಿಸಲಾಗಿತ್ತು. ಅವರು ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದು, ಹಿರಿಯ ಪುತ್ರಿಯ ವೈವಾಹಿಕ ಡೈವೊರ್ಸ್ ಆಗಿದ್ದು ಅದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಲಾಗಿದೆ. ಮೃತರ ಪುತ್ರ ಅಬ್ದುಲ್ ಅಜಿಜ್ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.







