ಲಾಹೋರ್ ಸ್ಫೋಟ ಪ್ರಕರಣ :300 ಮಂದಿ ಶಂಕಿತರ ಬಂಧನ

ಲಾಹೋರ್, ಫೆ.19: ಕಳೆದ ಸೋಮವಾರ ಲಾಹೋರ್‌ನಲ್ಲಿ ಭೀಕರ ಬಾಂಬ್ ಸ್ಫೋಟದ ಘಟನೆಯ ಬಳಿಕ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಪೊಲೀಸರು ಭದ್ರತಾಕ್ರಮಗಳನ್ನು ಬಿಗಿಗೊಳಿಸಿದ್ದು, ಬಹುತೇಕ ಅಫ್ಘಾನ್ ಪ್ರಜೆಗಳು ಸೇರಿದಂತೆ 300ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.
ಸಿಂಧ್ ಪ್ರಾಂತದ ಸೆಹವಾನ್ ನಗರದ ಸೂಫಿ ದರ್ಗಾವೊಂದರಲ್ಲಿ ಗುರುವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ 88 ಮಂದಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಭದ್ರತಾಕ್ರಮಗಳನ್ನು ಬಿಗಿಗೊಳಿಸಿದ್ದಾರೆ.
‘‘ ಗುರುವಾರ ಹಾಗೂ ಶನಿವಾರದಂದು ಸೂಕ್ತ ಗುರುತುಪತ್ರಗಳಿಲ್ಲದ ಕಾರಣಕ್ಕಾಗಿ ಬಹುತೇಕ ಅಫ್ಘನ್ನರು ಹಾಗೂ ಪಶ್ತೂ ಜನಾಂಗೀಯರು ಸೇರಿದಂತೆ 200ಕ್ಕೂ ಅಧಿಕ ಮಂದಿಯನ್ನು ಪೊಲೀಸರು, ಬಂಧಿಸಿದ್ದಾರೆಂದು ಪಂಜಾಬ್ ಪೊಲೀಸ್ ವಕ್ತಾರ ನಿಯಾಬ್ ಹೈದರ್ ತಿಳಿಸಿದ್ದಾರೆ. ಜನರ ಗುರುತನ್ನು ದೃಢಪಡಿಸಿಕೊಳ್ಳಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪೊಲೀಸರು ಬಳಸಿಕೊಂಡಿದ್ದರೆಂದು ಹೈದರ್ ಹೇಳಿದ್ದಾರೆ.
ಏತನ್ಮಧ್ಯೆ ಕಳೆದ ಸೋಮವಾರ, ಲಾಹೋರ್‌ನಲ್ಲಿ ನಡೆದ ಬಾಂಬ್ ಸ್ಫೋಟದ ಸೂತ್ರಧಾರಿಯೆನ್ನಲಾದ ಅನ್ವರುಲ್ ಹಕ್ ಎಂಬಾತನಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.





