ಮಂಗಳೂರು: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ನಡುವೆ ಘರ್ಷಣೆ, ಓರ್ವನ ಹತ್ಯೆ; ಇನ್ನೋರ್ವನಿಗೆ ಗಾಯ

ಮಂಗಳೂರು, ಫೆ. 19: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಗ್ಗೆ ಮರೋಳಿಯ ನಿಡ್ಡೇಲ್ ಎಂಬಲ್ಲಿ ನಡೆದಿದೆ.
ನಿಡ್ಡೇಲ್‌ನ ನಿವಾಸಿ ಪ್ರತಾಪ್ (30) ಹತ್ಯೆಗೀಡಾದವರು. ಗಾಯಾಳುವನ್ನು ಮಣಿಕಂಠ (28) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು. ಮಿಥುನ್, ಕೌಶಿಕ್, ಸಾಗರ್, ನಿಶಿತ್, ತಿಲಕ್, ನಿಖಿಲ್, ಮನೀಶ್, ಶರಣ್, ಶಿವು, ರಾಜೇಶ್, ಮನೋಜ್ ಆರೋಪಿಗಳು.
ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಆರೋಪಿಗಳು ರವಿವಾರ ನಿಡ್ಡೇಲ್‌ಗೆ ಬಂದು ಮಣಿಕಂಠನನ್ನು ತರಾಟೆಗೆ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಣಿಕಂಠ ಕುಡಿತದ ಅಮಲಿನಲ್ಲಿದ್ದು, ಆತನೊಂದಿಗೆ ಪ್ರತಾಪ್ ಕೂಡ ಇದ್ದ.
ಕಾರ್ಯಕರ್ತರ ನಡುವಿನ ಮಾತುಕತೆಯು ವಿಕೋಪಕ್ಕೇರಿದ್ದು, ಆಕ್ರೋಶಗೊಂಡ ಆರೋಪಿಗಳು ಇಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಮಣಿಕಂಠ ತಪ್ಪಿಸಿಕೊಂಡರೆ, ಪ್ರತಾಪ್ ಸಾವನ್ನಪ್ಪಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.







