ವಿಧಾನಸಭೆಯಲ್ಲಿ ಕೋಲಾಹಲ; ವರದಿಗೆ ರಾಜ್ಯಪಾಲರ ಹುಕುಂ

ಚೆನ್ನೈ,ಫೆ.19: ತಮಿಳುನಾಡಿನ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸಮತ ಯಾಚನೆ ವೇಳೆ ನಡೆದ ಕೋಲಾಹಲಕ್ಕೆ ಸಂಬಂಧಿಸಿ ತಕ್ಷಣ ವರದಿ ನೀಡುವಂತೆ ವಿಧಾನಸಭೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಮುಖ್ಯ ಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿಶ್ವಾಸ ಮತ ಯಾಚನೆಯ ವೇಳೆ ಗೊಂದಲ ಉಂಟಾಗಿತ್ತು. ವಿಶ್ವಾಸ ಮತ ಯಾಚನೆಯ ಕ್ರಮವನ್ನು ಪ್ರಶ್ನಿಸಿ ರಾಜ್ಯಪಾಲರಿಗೆ ದೂರು ನೀಡಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಈ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿದ್ದರು.
ವಿಧಾಸನಭೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಸ್ಟಾಲಿನ್ ಅವರು ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರಿಗೆ ದೂರು ಸಲ್ಲಿಸಿದ್ದರು.
ಶನಿವಾರ ಸದನದಲ್ಲಿ ನಡೆದಿರುವ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ರದ್ದುಪಡಿಸಿ ಮತ್ತೊಮ್ಮೆ ವಿಶ್ವಾಸ ಮತ ಯಾಚನೆಗೆ ಸೂಚಿಸಬೇಕು ಎಂದೂ ಅವರು ಆಗ್ರಹಿಸಿದ್ದರು.
ಡಿಎಂಕೆ ಶಾಸಕರನ್ನು ಹೊರಹಾಕಿದ ಕ್ರಮವನ್ನು ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದರು.ರಾಜ್ಯಪಾಲರ ಭೇಟಿ ನಂತರ ಡಿಎಂಕೆ ಶಾಸಕರು ರಾಜಭವನದ ಎದುರು ಧರಣಿ ನಡೆಸಿ‘ಸರಕಾರವನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.





