ಇಂದು ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ
ಹೊಸಮುಖಗಳು, ಅಫ್ಘಾನ್ ಆಟಗಾರರತ್ತ ಎಲ್ಲರ ಚಿತ್ತ

ಬೆಂಗಳೂರು, ಫೆ.19: ಉದ್ಯಾನ ನಗರಿಯಲ್ಲಿ ಸೋಮವಾರ 10ನೆ ಆವೃತ್ತಿಯ ಐಪಿಎಲ್‌ಗೆ ಆಟಗಾರರ ಬಿಡ್ ಪ್ರಕ್ರಿಯೆ ನಡೆಯಲಿದ್ದು, 8 ಫ್ರಾಂಚೈಸಿಗಳು ಹರಾಜು ಪಟ್ಟಿಯಲ್ಲಿರುವ 350ಕ್ಕೂ ಅಧಿಕ ಆಟಗಾರರ ಪೈಕಿ ಗರಿಷ್ಠ 76 ಆಟಗಾರರನ್ನು ಖರೀದಿಸುವ ಅವಕಾಶವಿದೆ.
10 ವರ್ಷಗಳ ಐಪಿಎಲ್ ವೃತ್ತದಲ್ಲಿ ಇದು ಕೊನೆಯ ಬಿಡ್ ಆಗಿದ್ದು, ಮುಂದಿನ ಆವೃತ್ತಿಯಲ್ಲಿ ಎಲ್ಲ ಆಟಗಾರರು ಹರಾಜು ಗುಂಪಿಗೆ ಬರಲಿದ್ದಾರೆ. ಒಂದು ತಂಡ ಗರಿಷ್ಠ 27 ಆಟಗಾರರನ್ನು ಹೊಂದಿರಬಹುದು. ಹೆಚ್ಚಿನ ಫ್ರಾಂಚೈಸಿಗಳು 22 ರಿಂದ 24 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಆಟಗಾರರ ಮೂಲಬೆಲೆ 10 ಲಕ್ಷ ರೂ.ನಿಂದ 2 ಕೋಟಿ ರೂ. ತನಕವಿದೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಯುವ ಆಟಗಾರರು ನೀಡಿರುವ ಪ್ರದರ್ಶನ ಹರಾಜಿನಲ್ಲಿ ಪರಿಗಣನೆಗೆ ಬರಬಹುದು.
ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಇಶಾಂತ್ ಶರ್ಮ 2 ಕೋ.ರೂ. ಮೂಲಬೆಲೆ ಹೊಂದಿದ್ದು, ಯಾವ ತಂಡದ ಪಾಲಾಗಲಿದ್ದಾರೆಂಬ ಕುತೂಹಲವಿದೆ. ‘ಐಪಿಎಲ್ ಸ್ಪೆಷ್ಟಲಿಸ್ಟ್’ ಎನಿಸಿಕೊಂಡಿರುವ ಇರ್ಫಾನ್ ಪಠಾಣ್ ಮೂಲ ಬೆಲೆ 50 ಲಕ್ಷ ರೂ. ಆಲ್‌ರೌಂಡ್ ಸಾಮರ್ಥ್ಯವಿರುವ ಪಠಾಣ್ ಹೆಚ್ಚು ಬಿಡ್ ಪಡೆಯಬಹುದು.
ಮೂಲಬೆಲೆ 30 ಲಕ್ಷ ರೂ. ಹೊಂದಿರುವ ಫಾಸ್ಟ್ ಬೌಲರ್ ವರುಣ್ ಆ್ಯರೊನ್ ಬಿಡ್ಡರ್‌ಗಳನ್ನು ತನ್ನತ್ತ ಸೆಳೆಯುವ ಸಾಧ್ಯತೆಯಿದೆ. ಹೊಸ ಆಟಗಾರರ ಪೈಕಿ ಜಾರ್ಖಂಡ್ ಬ್ಯಾಟ್ಸ್‌ಮನ್ ವಿರಾಟ್ ಸಿಂಗ್ ಹಾಗೂ ಪೃಥ್ವಿ ಶಾ(ಇಬ್ಬರು 10 ಲಕ್ಷ ರೂ.ಮೂಲಬೆಲೆ) ಉತ್ತಮ ಬಿಡ್‌ನ್ನು ಆಕರ್ಷಿಸುವ ನಿರೀಕ್ಷೆಯಿದೆ.
ವಿದೇಶಿ ಆಟಗಾರರ ಪೈಕಿ ಇಂಗ್ಲೆಂಡ್‌ನ ನಾಯಕ ಇಯಾನ್ ಮೊರ್ಗನ್, ಆರಂಭಿಕ ಆಟಗಾರ ಜಾಕ್ಸನ್ ರಾಯ್, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಪ್ರಮುಖರಾಗಿದ್ದಾರೆ. ಇವರೆಲ್ಲರೂ ಎಪ್ರಿಲ್‌ನಲ್ಲಿ ಮಾತ್ರ ಐಪಿಎಲ್‌ಗೆ ಲಭ್ಯವಿರುತ್ತಾರೆ.
ವಿಂಡೀಸ್ ಓಪನರ್ ಎವಿನ್ ಲೂವಿಸ್, ಆಫ್ರಿಕದ ಬೌಲರ್ ಕಾಗಿಸೊ ರಬಾಡ, ಅಫ್ಘಾನಿಸ್ತಾನದ ಐವರು ಆಟಗಾರರು ಹರಾಜಿನಲ್ಲಿದ್ದು, ಮುಹಮ್ಮದ್ ಶಹಬಾಝ್, ಸ್ಪಿನ್ನರ್ ಮುಹಮ್ಮದ್ ನಬಿ ಹರಾಜಾಗುವ ಸಾಧ್ಯತೆಯಿದೆ.
ಪಂಜಾಬ್(23.35 ಕೋ.ರೂ.) ಹಾಗೂ ಡೆಲ್ಲಿ(23.10 ಕೋ.ರೂ.) ಆಟಗಾರರನ್ನು ಖರೀದಿಸಲು ತನ್ನ ಬಳಿ ಹೆಚ್ಚು ಬಜೆಟ್ ಹೊಂದಿವೆ.
ಬಿಸಿಸಿಐ ಉನ್ನತಾಧಿಕಾರಿಗಳಿಗೆ ಹರಾಜಿನಲ್ಲಿ ಭಾಗವಹಿಸದಂತೆ ಸಿಒಎ ನಿರ್ಬಂಧ
ಹೊಸದಿಲ್ಲಿ, ಫೆ.19: ಮಾಜಿ ಸಿಎಜಿ ವಿನೋದ್ ರಾಯ್ ನೇತೃತ್ವದ ಆಡಳಿತಾಧಿಕಾರಿಗಳ ಸಮಿತಿ ಸೋಮವಾರ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಭಾಗವಹಿಸದಂತೆ ಬಿಸಿಸಿಐನ ಮೂವರು ಉನ್ನತಾಧಿಕಾರಿಗಳಿಗೆ ನಿರ್ಬಂಧ ಹೇರಿದೆ.
ಸಿ.ಕೆ.ಖನ್ನಾ, ಅಮಿತಾಭ್ ಚೌಧರಿ, ಅನಿರುದ್ಧ್ ಚೌಧರಿ ಹಾಗೂ ಐಪಿಎಲ್ ಆಡಳಿತ ಮಂಡಳಿಯ ಮಾಜಿ ಸದಸ್ಯರುಗಳು ಐಪಿಎಲ್ ಆಟಗಾರರ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ. ಇವರೆಲ್ಲರ ವಿರುದ್ಧ ವಿಚಾರಣೆ ಗೌರವಾನ್ವಿತ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿದೆ ಎಂದು ಸಿಒಎ ಪ್ರಕಟನೆಯಲ್ಲಿ ತಿಳಿಸಿದೆ.
ಖನ್ನಾ ಬಿಸಿಸಿಐನ ಹಿರಿಯ ಉಪಾಧ್ಯಕ್ಷರಾಗಿದ್ದರೆ, ಅನಿರುದ್ಧ್ ಖಜಾಂಚಿಯಾಗಿದ್ದರು. ಮತ್ತೊಂದೆಡೆ ಅಮಿತಾಭ್ ಜೊತೆ ಕಾರ್ಯದರ್ಶಿಯಾಗಿದ್ದರು. ಸುಪ್ರೀಂಕೋರ್ಟ್‌ನಿಂದ ಆಡಳಿತಾಧಿಕಾರಿ ನೇಮಕವಾದ ಬಳಿಕ ಇವರೆಲ್ಲರೂ ಅಧಿಕಾರ ಕಳೆದುಕೊಂಡಿದ್ದಾರೆ.







