ಪಾಕಿಸ್ತಾನಕ್ಕೆ ಸೋಲುಣಿಸಿದ ಭಾರತ ಫೈನಲ್‌ಗೆ
ವನಿತೆಯರ ವಿಶ್ವಕಪ್ ಅರ್ಹತಾ ಟೂರ್ನಿ

ಕೊಲಂಬೊ,ಫೆ.19: ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಫೈನಲ್‌ಗೆ ತೇರ್ಗಡೆಯಾಗಿದೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್‌ನ್ನು 43.4 ಓವರ್‌ಗಳಲ್ಲಿ ಕೇವಲ 67 ರನ್‌ಗೆ ಆಲೌಟ್ ಮಾಡಿದ ಭಾರತದ ವನಿತೆಯರು ಕೇವಲ 22.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 70ರನ್ ಗಳಿಸಿ ಸೂಪರ್-6 ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರು.
ಭಾರತದ ಪರ ಏಕ್ತಾ ಬಿಶ್ತ್ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದು, 10 ಓವರ್‌ಗಳಲ್ಲಿ 7 ಮೇಡನ್ ಓವರ್ ಸಹಿತ 8 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಶಿಖಾ ಪಾಂಡೆ(2-09) ಎರಡು ವಿಕೆಟ್ ಪಡೆದು ಬಿಶ್ತ್‌ಗೆ ಉತ್ತಮ ಸಾಥ್ ನೀಡಿದರು. ನಿರಂತರವಾಗಿ ವಿಕೆಟ್ ಕಳೆದುಕೊಂಡ ಪಾಕ್‌ನ ಪರ ಕೇವಲ ಇಬ್ಬರು ಆಟಗಾರ್ತಿಯರು ಎರಡಂಕೆ ಸ್ಕೋರ್ ದಾಟಿದರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತ ತಂಡ ದೀಪ್ತಿ ಶರ್ಮ(ಅಜೇಯ 29) ಹಾಗೂ ಹರ್ಮನ್‌ಪ್ರೀತ್ ಕೌರ್(24) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 165 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ದೀಪ್ತಿ ಹಾಗೂ ಹರ್ಮನ್‌ಪ್ರೀತ್ 3ನೆ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದರು. ಪಾಕಿಸ್ತಾನದ ಪರ ಸಾದಿಯಾ ಯೂಸುಫ್ 19ರನ್‌ಗೆ 2 ವಿಕೆಟ್ ಪಡೆದರು.-
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮಹಿಳೆಯರು: 43.4 ಓವರ್‌ಗಳಲ್ಲಿ 67 ರನ್‌ಗೆ ಆಲೌಟ್
(ಆಯೇಷಾ ಝಾಫರ್ 19, ಏಕ್ತಾ ಬಿಶ್ತ್ 5-08, ಶಿಖಾ ಪಾಂಡೆ 2-09)
ಭಾರತದ ಮಹಿಳೆಯರು: 22.3 ಓವರ್‌ಗಳಲ್ಲಿ 70/3
(ದೀಪ್ತಿ ಶರ್ಮ ಅಜೇಯ 29, ಹರ್ಮನ್‌ಪ್ರೀತ್ ಕೌರ್ 24, ಸಾದಿಯಾ ಯೂಸುಫ್ 2-19)







