ಶಿವಾಜಿ ಧರ್ಮಸಹಿಷ್ಣು ಆಗಿದ್ದರು: ಲೋಬೊ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಮಂಗಳೂರು, ಫೆ.19: ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮಹಿಳಾಪರ ಕಾಳಜಿ, ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಚಿಂತನೆ ಇಂದಿಗೂ ಮಾದರಿಯಾಗಿದೆ. ಹಿಂದೂ ಧರ್ಮದ ಪ್ರಬಲ ಪ್ರತಿಪಾದಕನಾಗಿದ್ದರೂ ಇತರ ಧರ್ಮಗಳ ಬಗ್ಗೆಗಿನ ಅಪಾರ ಗೌರವವು ಅವರ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ದ.ಕ. ಜಿಲ್ಲಾಡಳಿತ, ದ.ಕ.ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದ.ಕ.ಜಿಲ್ಲೆ ಇದರ ವತಿಯಿಂದ ರವಿವಾರ ಜಿಪಂ ಸಭಾಂಗಣ ದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 390ನೆ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶಿವಾಜಿ ಮುಸ್ಲಿಮ್ ವಿರೋಧಿಯಾಗಿರಲಿಲ್ಲ. ಆದರೆ ಶಿವಾಜಿ ಇಲ್ಲದಿರುತ್ತಿದ್ದರೆ ಕಾಶಿಯ ಸಂಸ್ಕೃತಿ ನಾಶವಾಗುತ್ತಿತ್ತು. ಮಥುರಾ ಮಸೀದಿಯಾಗುವ ಸಾಧ್ಯತೆಯಿತ್ತು ಎಂದು ಲೋಬೊ ಅಭಿಪ್ರಾಯಿಸಿದರು.
ತಪ್ಪು ಗ್ರಹಿಕೆಯನ್ನು ಮೊಳಕೆಯಲ್ಲಿ ಚಿವುಟಬೇಕು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ, ಶಿವಾಜಿ ಧರ್ಮಸಹಿಷ್ಣು ನಿಜ. ಆದರೆ, ಆತನಿಲ್ಲದಿರುತ್ತಿದ್ದರೆ ಮಥುರಾ ಮಸೀದಿಯಾಗುತ್ತಿತ್ತು ಎಂಬ ಶಾಸಕ ಜೆ.ಆರ್.ಲೋಬೊ ಹೇಳಿಕೆ ತಪ್ಪು ಗ್ರಹಿಕೆಯಿಂದ ಕೂಡಿದೆ. ಹಿಂದೆ ರಾಜ-ಮಹಾರಾಜರುಗಳಿಗೆ ಸಾಮ್ರಾಜ್ಯ ವಿಸ್ತರಿಸುವ ಗುರಿ ಯಿತ್ತೇ ವಿನಹ ಧರ್ಮಪ್ರಚಾರದ ಉದ್ದೇಶವಿರಲಿಲ್ಲ. ಶಿವಾಜಿಯನ್ನು ಉಪಾಯದಿಂದ ಕೊಲ್ಲಲು ಒಬ್ಬ ಹಿಂದೂ ಯತ್ನಿಸಿದಾಗ ಅಪಾಯದಿಂದ ಪಾರು ಮಾಡಿ ರುವುದು ಶಿವಾಜಿಯ ಒಬ್ಬ ಮುಸ್ಲಿಮ್ ಸೇನಾನಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಈ ತಪ್ಪು ಗ್ರಹಿಕೆಗಳನ್ನು ಮೊಳಕೆಯಲ್ಲೇ ಚಿವುಟದಿದ್ದರೆ ಇಂದಿನ ವಿದ್ಯಾರ್ಥಿಗಳಿಗೆ ಈ ಸುಳ್ಳುಗಳೇ ಸತ್ಯವಾಗುವ ಅಪಾಯವಿದೆ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿದರು.
ಉಪನ್ಯಾಸಕ ರಾಮಪ್ರಸಾದ್ ಕಂಚೋಡ್ ವಿಶೇಷ ಉಪನ್ಯಾಸ ನೀಡಿದರು. ಮೇಯರ್ ಹರಿನಾಥ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ ರೇಣುಕಾಪ್ರಸಾದ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಸುರೇಶ್ ರಾವ್ ಕೆ.ಲಾಡ್, ಜಿಲ್ಲಾಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್ಮೋರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಉಪಸ್ಥಿತರಿದ್ದರು.







