ಕೇರಳ ನಟಿಯ ಅಪಹರಣದ ಹಿಂದೆ ನಟ, ರಾಜಕಾರಣಿಯ ಪುತ್ರರ ಪಾತ್ರ ?

ತಿರುವನಂತಪುರಂ, ಫೆ.20: ದಕ್ಷಿಣದ ಖ್ಯಾತ ನಟಿ ಭಾವನಾ ಅವರ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಹಿಂದೆ ಖ್ಯಾತ ಮಲಯಾಳಂ ನಟ ಹಾಗೂ ಆಡಳಿತ ಎಲ್.ಡಿ.ಎಫ್. ಇದರ ಪ್ರಮುಖ ಪಕ್ಷದ ಹಿರಿಯ ನಾಯಕರೊಬ್ಬರ ಇಬ್ಬರು ಪುತ್ರರ ಶಾಮೀಲಾತಿ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. ಈ ಮೂವರ ಅಣತಿಯಂತೆಯೇ ಏಳು ಜನರ ತಂಡವು ಭಾವನಾ ಅವರನ್ನು ಶುಕ್ರವಾರ ರಾತ್ರಿ ಅಪಹರಿಸಿ ಅವರಿಗೆ ಕಿರುಕುಳ ನೀಡಿದ್ದಾಗಿ ತನಿಖಾ ತಂಡ ಕಂಡುಕೊಂಡಿದೆಯೆನ್ನಲಾಗಿದೆ.
ಮೂಲಗಳ ಪ್ರಕಾರ ಈ ಪ್ರಕರಣದ ಹಿಂದೆ ಇದ್ದಾರೆನ್ನಲಾದ ಖ್ಯಾತ ನಟರೊಬ್ಬರೊಂದಿಗೆ ಭಾವನಾ ಬಹಳ ಆತ್ಮೀಯರಾಗಿದ್ದರೂ ನಟ ಹಾಗೂ ಆತನ ಪತ್ನಿಯ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಅವರು ನಟನ ಪತ್ನಿಯ ಪರ ವಹಿಸಿದ್ದರಿಂದ ಅವರಿಬ್ಬರೂ ವಿಚ್ಛೇದನ ಪಡೆಯುವಂತಾಗಿತ್ತೆನ್ನಲಾಗಿದೆ. ಅಂದಿನಿಂದ ಆ ನಟ ಕೂಡ ಭಾವನಾರೊಂದಿಗೆ ಆತ್ಮೀಯವಾಗಿಲ್ಲವೆನ್ನಲಾಗಿದೆ. ಮೇಲಾಗಿ ಆ ನಟ ಭಾವನಾ ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿದ್ದರೆಂಬ ಮಾತುಗಳೂ ಕೇಳಿ ಬರುತ್ತಿವೆ.
ತರುವಾಯ ಈ ಪ್ರಕರಣದ ಇತರ ಇಬ್ಬರು ಶಂಕಿತರು ತಮ್ಮ ರಾಜಕೀಯ ಪ್ರಭಾವದಿಂದ ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದರೆನ್ನಲಾಗಿದೆ. ಇತ್ತೀಚೆಗೆ ಚಿತ್ರಮಂದಿರ ಮಾಲಕರು ಚಿತ್ರದ ಕಲೆಕ್ಷನ್ ನಲ್ಲಿ ದೊಡ್ಡ ಮೊತ್ತ ಬೇಡಿಕೆಯಿರಿಸಿದಾಗ ಇವರಿಬ್ಬರು ತಮ್ಮ ಪ್ರಭಾವ ಬಳಸಿ ಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಿದ್ದರೆಂದು ತಿಳಿದು ಬಂದಿದೆಯಲ್ಲದೆ, ಅವರಿಬ್ಬರೂ ಈ ಪ್ರಕರಣದಲ್ಲಿ ಶಂಕಿತ ನಟನ ನಿರ್ಮಾಣ ಸಂಸ್ಥೆಯೊಂದಿಗೆ ಹೊಸ ಯೋಜನೆಗಳಲ್ಲಿ ಕೈಜೋಡಿಸುವ ಸಾಧ್ಯತೆಗಳ ಬಗ್ಗೆಪರಾಮರ್ಶಿಸುತ್ತಿದ್ದರೆನ್ನಲಾಗಿದೆ.
ತರುವಾಯ ನಟಿಯನ್ನು ಅಪಹರಿಸಲು ದುಷ್ಕರ್ಮಿಗಳ ತಂಡದ ನಾಯಕ ಸುನೀಲ್ ಕುಮಾರ್ ಎಂಬಾತನಿಗೆ ರೂ. 50 ಲಕ್ಷ ನೀಡಲಾಗಿತ್ತೆಂದು ತಿಳಿದು ಬಂದಿದೆ. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಶಂಕಿತನೊಬ್ಬ ತಿಳಿಸಿದಂತೆ ಆತ ಇತರ ಸದಸ್ಯರಿಗೆ ರೂ.30 ಲಕ್ಷ ಕೊಡುವುದಾಗಿ ಹೇಳಿದ್ದ.
ಪೊಲೀಸರು ಘಟನೆಯ ಸಂಬಂಧ ಮೂವರನ್ನು ಬಂಧಿಸಿದ್ದು, ನಟಿ ಘಟನೆ ನಡೆದ ದಿನದಂದು ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಮಾರ್ಟಿನ್ ಕೂಡ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆಂದು ಪೊಲೀಸರು ಹೇಳಿದ್ದಾರೆ.