ಹಳೆ ಟಿವಿಯೊಳಗೆ ಒಂದು ಲಕ್ಷ ಡಾಲರ್ ಪತ್ತೆ!

ಒಂಟಾರಿಯೊ, ಫೆ.20: ಹಳೆ ಟಿವಿ ಸೆಟ್ ಗಳೊಳಗೆ ಸಾಮಾನ್ಯವಾಗಿ ಹಳೆ ವಯರುಗಳು, ಟ್ಯೂಬುಗಳು, ಗ್ಲಾಸ್ ಮತ್ತು ಪ್ಲಾಸ್ಟಿಕ್ ಬಿಡಿಭಾಗಗಳು ಕಾಣಸಿಗುತ್ತವೆ. ಆದರೆ ಇಲ್ಲೊಬ್ಬನಿಗೆ ಹಳೆ ಟಿವಿಯೊಳಗೆ ಒಂದು ಲಕ್ಷ ಡಾಲರ್ ಸಿಕ್ಕಿದೆ. ಒಂಟಾರಿಯೋದ ರಿಸೈಕ್ಲಿಂಗ್ ಸ್ಥಾವರವೊಂದರಲ್ಲಿ ಹಳೆ ಟಿವಿ ಸೆಟ್ ಒಂದರ ಒಳಗೆ ಪೆಟ್ಟಿಗೆಯೊಂದರಲ್ಲಿ ಈ ಹಣ ಪತ್ತೆಯಾಗಿದೆ.
ಸ್ಥಾವರದ ಜನರಲ್ ಮ್ಯಾನೇಜರ್ ರಿಕ್ ಡೆಸ್ಚಾಂಪ್ಸ್ ಅವರು ಹೇಳುವಂತೆ 50 ಡಾಲರುಗಳ ನಾಲ್ಕು ಕಟ್ಟುಗಳು ಪತ್ತೆಯಾಗಿವೆ. ಇವುಗಳನ್ನುಸ್ಥಾವರದ ಅಧಿಕಾರಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಉದ್ಯೋಗಿಯನ್ನು ಅವರು ಪ್ರಶಂಸಿಸಿದ್ದಾರೆ.
ಹಣದೊಂದಿಗೆ ಕೆಲವು ದಾಖಲೆಗಳೂ ಪತ್ತೆಯಾಗಿದ್ದು, ಅವುಗಳ ಮುಖಾಂತರ ಪೊಲೀಸರು ಟಿವಿಯ ಮೂಲ ಮಾಲಕ 68 ವರ್ಷದ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಿದ್ದಾರೆ. ಆತನ ಪ್ರಕಾರ ಆತ ಆ ಟಿವಿಯನ್ನು 30 ವರ್ಷಗಳ ಹಿಂದೆ ತನ್ನ ಸ್ನೇಹಿತನೊಬ್ಬನಿಗೆ ನೀಡಿದ್ದ ಹಾಗೂ ಟಿವಿಯೊಳಗೆ ಹಣವಿಟ್ಟಿದ್ದು ಮರೆತು ಹೋಗಿರುವುದಾಗಿಯೂ ಹೇಳಿದ.
ತನ್ನ ನಂತರ ತನ್ನ ಕುಟುಂಬಕ್ಕಾಗಿ ಆತ ಈ ಹಣವನ್ನು ಟಿವಿಯೊಳಗೆ ಇಟ್ಟಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಹಣವನ್ನು ಟಿವಿಯ ಮೂಲ ಮಾಲಕನಿಗೆ ನೀಡಲಾಗಿದ್ದುಆತ ಅದನ್ನು ಉಳಿತಾಯ ಖಾತೆಯಲ್ಲಿ ಠೇವಣಿಯಿಡಬಹುದೆಂದು ಪೊಲೀಸರುಹೇಳಿದ್ದಾರೆ.







