ಕೇರಳದಲ್ಲಿ ಇನ್ನು ರಸ್ತೆ ಡಾಮರೀಕರಣಕ್ಕೆ ಪ್ಲಾಸ್ಟಿಕ್ ಬಳಕೆ

ಸಾಂದರ್ಭಿಕ ಚಿತ್ರ
ತಿರುವನಂತಪುರಂ,ಫೆ. 20: ಕೇರಳದಲ್ಲಿ ರಸ್ತೆಗೆ ಪ್ಲಾಸ್ಟಿಕ್ ಡಾಮರೀಕರಣ ಆರಂಭವಾಗಲಿದೆ. ರಾಜ್ಯದಲ್ಲಿ ಈವರೆಗೆ ಎಂಟು ಟನ್ ಪ್ಲಾಸ್ಟಿಕ್ ಮಾಲಿನ್ಯ ರಸ್ತೆಗಳ ರೀಟಾರಿಂಗ್ಗೆ ಉಪಯೋಗಿಸಲಾಗಿದೆ. 15 ಟನ್ ಪ್ಲಾಸ್ಟಿಕ್ ಒಂದು ತಿಂಗಳೊಳಗೆ ಅಗತ್ಯವಿದೆ ಎಂದು ಪಿಡಬ್ಲ್ಯೂಡಿ ಇಲಾಖೆ ಕ್ಲೀನ್ ಕೇರಳ ಕಂಪೆನಿಗೆ ಬೇಡಿಕೆ ಇಟ್ಟಿದೆ.
ಪ್ಲಾಸ್ಟಿಕ್ ಮಾಲಿನ್ಯ ಅಗತ್ಯದಷ್ಟು ಸಿಗದ ಸ್ಥಿತಿ ಈಗ ನಿರ್ಮಾಣವಾಗಿದೆ. ಪಿಡಬ್ಲ್ಯೂಡಿ ಇಲಾಖೆಯಲ್ಲದೆ ಸ್ಥಳೀಯಾಡಳಿತದ ವತಿಯಿಂದ ನವೀಕರಣಗೊಳ್ಳುತ್ತಿರುವ ರಸ್ತೆಗಳಲ್ಲಿ ಶೇ. 10ರಷ್ಟು ಪ್ಲಾಸ್ಟಿಕ್ ರಸ್ತೆ ನಿರ್ಮಿಸಲು ಸರಕಾರ ಆದೇಶಿಸಿದೆ.
ಇದರ ಆಧಾರದಲ್ಲಿ 17 ಪಂಚಾಯತ್ ಮತ್ತು ಕಳಮಶೇರಿ ನಗರಸಭೆ, ಪಾಲಕ್ಕಾಡ್ ಬ್ಲಾಕ್ ಪಂಚಾಯತ್ ಪ್ಲಾಸ್ಟಿಕ್ ಟಾರಿಂಗ್ ನಡೆಸಿತು. ಪಿಡಬ್ಲ್ಯೂಡಿ ತಿರುವನಂತಪುರಂ,ಪತ್ತನಂತಿಟ್ಟ ಸಹಿತ ಕೆಲವು ಜಿಲ್ಲೆಗಳಲ್ಲಿ ಡಾಮರೀಕರಣಕ್ಕೆ ಪ್ಲಾಸ್ಟಿಕ್ ಬಳಕೆ ಆರಂಭಿಸಿದೆ. ಇದರೊಂದಿಗೆ ಕೇರಳ ಎದುರಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ಸಮಸ್ಯೆ ಪರಿಹಾರವೂ ಆಗುತ್ತಿದೆ.
50 ಮೈಕ್ರೋನ್ಗಿಂತ ಕಡಿಮೆ ಸಂಸ್ಕರಣೆ ನಡೆಸಿ ಪುನಃ ಉಪಯೋಗಿಸಲು ಆಗದ ಪ್ಲಾಸ್ಟಿಕ್ನ್ನು ಟಾರಿಂಗ್ಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ಕಿಲೊಮೀಟರ್ ಟಾರಿಂಗ್ಗೆ 1700 ಕಿಲೊ ಪ್ಲಾಸ್ಟಿಕ್ ಬಳಸಬಹುದಾಗಿದೆ.
ಪ್ಲಾಸ್ಟಿಕ್ನಿಂದ ಹಣ:
ಪ್ಲಾಸ್ಟಿಕ್ ಮಾಲಿನ್ಯವನ್ನು ಸಂಗ್ರಹಿಸಿ ಡಾಮರಿಂಗ್ಗೆ ಸೂಕ್ತವಾಗುವಂತೆ ಮಾಡಿ ಕೇರಳದ ಕೆಲವು ಸಂಸ್ಥೆಗಳು ಲಾಭ ಮಾಡುತ್ತಿವೆ. ಆಟ್ಟಿಂಗಲ್, ಪಯ್ಯನ್ನೂರ್, ಕೊಯಿಲಾಂಡಿ, ಪೆರಿಂದಲ್ ಮಣ್ಣ ನಗರಸಭೆಗಳು, ಕೊಚ್ಚಿ ಕಾರ್ಪೊರೇಷನ್, ವಾಣಿಮೇಲ್, ಕಲ್ಲಾರ್ಕ್ಕಾಡ್, ಕುಟ್ಯಾಡಿ ಪಂಚಾಯತ್ಗಳು ಕ್ಲೀನ್ ಕೇರಳ ಕಂಪೆನಿಗಳಿಗೆ ಪ್ಲಾಸ್ಟಿಕ್ ಮಾರುತ್ತಿವೆ.
ಕಿಲೋ ಒಂದರ ಹದಿನೈದು ರೂಪಾಯಿ ದೊರಕುತ್ತದೆ. ಕ್ಲೀನ್ ಕೇರಳ ಕಂಪೆನಿ ಕಿಲೊಗೆ 20 ರೂಪಾಯಿಗೆ ಮಾರುತ್ತಿದೆ. ಪ್ಲಾಸ್ಟಿಕ್ ಶೆಡ್ಡಿಂಗ್ಗೆ ಕೇವಲ ಐದು ಲಕ್ಷರೂಪಾಯಿ ಖರ್ಚು ತಗಲುತ್ತದೆ. ಶೇ.15ರಷ್ಟು ಹೆಚ್ಚು ಹಣ:
ಪ್ಲಾಸ್ಟಿಕ್ ಮಿಶ್ರಿತ ರಸ್ತೆ ನಿರ್ಮಾಣಕ್ಕೆ ಶೇ.15ರಷ್ಟು ಹೆಚ್ಚು ಹಣವನ್ನು ಬಿಡುಗಡೆಗೊಳಿಸಲು ಪಿಡಬ್ಲ್ಯೂಡಿ ಇಲಾಖೆ ತೀರ್ಮಾನಿಸಿದೆ. ಹೈವೇ ರಿಸರ್ಚ್ ಇನ್ಸ್ಟಿಟ್ಯೂಟ್ ನೇತೃತ್ವದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ಗಳು ಪ್ಲಾಸ್ಟಿಕ್ ರಸ್ತೆ ನಿರ್ಮಾಣಕ್ಕೆ ತರಬೇತಿ ನೀಡಿದ್ದಾರೆ ಎಂದು ವರದಿಯಾಗಿದೆ.







