ಅಲ್ಪಸಂಖ್ಯಾತ ಉದ್ಯೋಗಿಗಳ ಸಂಖ್ಯೆ ಕುರಿತ ಆರ್ ಟಿ ಐ ಗೆ ಉತ್ತರಿಸಲು ನಿರಾಕರಿಸಿದ ಪ್ರಧಾನಿ ಕಚೇರಿ

ಹೊಸದಿಲ್ಲಿ, ಫೆ.20: ‘‘ಮಾಹಿತಿ ಲಭ್ಯವಿಲ್ಲ’’ ಎಂಬ ನೆಪವೊಡ್ಡಿ ತನ್ನಲ್ಲಿ ಕೆಲಸ ಮಾಡುವ ಅಲ್ಪಸಂಖ್ಯಾತ ಉದ್ಯೋಗಿಗಳ ಸಂಖ್ಯೆಯ ಕುರಿತು ಆರ್ ಟಿಐ ಅರ್ಜಿಯೊಂದಕ್ಕೆ ಉತ್ತರಿಸಲು ಪ್ರಧಾನಿ ಕಾರ್ಯಾಲಯವು ನಿರಾಕರಿಸಿದೆ.
ಟುಸರ್ಕಲ್ಸ್.ನೆಟ್ ಇದರ ವರದಿಗಾರ ಆರ್ ಟಿಐ ಅರ್ಜಿಯೊಂದನ್ನು ಸಲ್ಲಿಸಿ ಪ್ರಧಾನಿ ಕಾರ್ಯಾಲಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ಉದ್ಯೋಗಿಗಳ ಬಗ್ಗೆ ಮಾಹಿತಿ ಕೋರಿತ್ತು. ಅಲ್ಪಸಂಖ್ಯಾತ ಸಮುದಾಯಗಳು, ಅಂದರೆ ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಖ್, ಪಾರ್ಸಿ ಹಾಗೂ ಜೈನ್ ಸಮುದಾಯದ ಉದ್ಯೋಗಿಗಳ ಬಗ್ಗೆ ನಿರ್ದಿಷ್ಟ ಅಂಕಿಸಂಖ್ಯೆಗಳನ್ನು ಕೇಳಲಾಗಿತ್ತು.
ಪ್ರಸಕ್ತ ಪ್ರಧಾನಿ ಕಾರ್ಯಾಲಯದಲ್ಲಿ 399 ಉದ್ಯೋಗಿಗಳಿದ್ದು, ಅವರ ಹೆಸರು, ಹುದ್ದೆ ಇತ್ಯಾದಿಗಳ ವಿವರ ಪ್ರಧಾನಿ ಕಾರ್ಯಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ತನ್ನ ಉತ್ತರದಲ್ಲಿ ಪ್ರಧಾನಿ ಕಾರ್ಯಾಲಯ ತಿಳಿಸಿತ್ತು. ಆದರೆ ಅರ್ಜಿದಾರರು 399 ಉದ್ಯೋಗಿಗಳ ಬಗ್ಗೆ ಮಾಹಿತಿಯನ್ನು ವೆಬ್ ಸೈಟ್ ನಿಂದ ಪಡೆಯಲು ಯತ್ನಿಸಿದಾಗ ಕೇವಲ 41 ಉದ್ಯೋಗಿಗಳ ಹೆಸರುಗಳು ಮಾತ್ರ ಕಂಡುಬಂದಿದ್ದು, ಅವುಗಳಲ್ಲಿ ಅಕ್ರಮ್ ರಿಝ್ವಿ, ನಿರ್ದೇಶಕರು, ಆರ್ ಟಿ ಐ ಇವರೊಬ್ಬರೇ ಮುಸ್ಲಿಮರಾಗಿದ್ದರು.
ಪ್ರಧಾನಿ ಕಾರ್ಯಾಲಯದಲ್ಲಿರುವ ಅಲ್ಪಸಂಖ್ಯಾತ ಅಥವಾ ಪರಿಶಿಷ್ಟ ಜಾತಿ/ವರ್ಗಗಳ ಉದ್ಯೋಗಿಗಳಿಗೆ ಸಂಬಂಧಿಸಿದ ಮಾಹಿತಿ ವಿವಿಧ ದಾಖಲೆಗಳಲ್ಲಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸುವುದು ಸಾರ್ವಜನಿಕ ಸಂಪನ್ಮೂಲಗಳನ್ನು ಬೇರೆ ಕಾರ್ಯಗಳಿಗೆ ಅನಗತ್ಯ ಉಪಯೋಗಿಸಿದಂತಾಗುವುದು ಎಂದು ಕಾರ್ಯಾಲಯ ಹೇಳಿತು. ‘‘ಅದು ಆರ್ ಟಿ ಐ ಕಾಯ್ದೆ, 2005 ಇದರ ಸೆಕ್ಷನ್ 7(9) ಇದರ ವಿರುದ್ಧವೂ ಆಗುವುದು’’ ಎಂದು ಪ್ರಧಾನಿ ಕಾರ್ಯಾಲಯ ತನ್ನ ಉತ್ತರದಲ್ಲಿ ತಿಳಿಸಿತ್ತು.
ಆರ್ ಟಿಐ ಉತ್ತರವೊಂದು ಸಂಬಂಧಿತ ದಾಖಲೆಯ ಸುರಕ್ಷತೆಗೆ ಅಪಾಯವೊಡ್ಡದೇ ಇದ್ದರೆ ಹಾಗೂ ಅದು ಸಾರ್ವಜನಿಕ ಸಂಸ್ಥೆಯೊಂದರ ಸಂಪನ್ಮೂಲಗಳನ್ನು ಅಸಮಾನವಾಗಿ ಬೇರೆಡೆಗೆ ತಿರುಗಿಸದೇ ಇದ್ದಲ್ಲಿ ಉತ್ತರವನ್ನು ಅರ್ಜಿಯಲ್ಲಿ ಕೇಳಿದ ಹಾಗೆಯೇ ನೀಡಬಹುದು ಎಂದು ಆರ್ ಟಿ ಐ ಕಾಯ್ದೆಯ ಸೆಕ್ಷನ್7(9) ಹೇಳುತ್ತದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕಳೆದ ತಿಂಗಳು ನೀಡಿದ ಆರ್ ಟಿಐ ಉತ್ತರದಲ್ಲಿ ಸಚಿವಾಲಯದ ಒಟ್ಟು 74 ಉದ್ಯೋಗಿಗಳಲ್ಲಿ ಕೇವಲ ಏಳು ಮಂದಿ ಮುಸ್ಲಿಮ್ ಹಾಗೂ ಒಬ್ಬ ಕ್ರಿಶ್ಚಿಯನ್ ಉದ್ಯೋಗಿಗಳಿದ್ದಾರೆಂದು ಹೇಳಿತ್ತು.







