ಉರ್ದು ಸಾಹಿತ್ಯದಲ್ಲೂ ಹೆಸರು ಮಾಡುತ್ತಿರುವ ಯಶಸ್ವಿ ಐಪಿಎಸ್ ಅಧಿಕಾರಿ ಮುರಳೀಧರ್ ಶರ್ಮ

ಕೊಲ್ಕತ್ತಾ, ಫೆ.20: ಕುಸ್ತಿ ಪಟು ಮಹಾವೀರ್ ಸಿಂಗ್ ಫೋಗಟ್ ಅವರು ಸಂಪ್ರದಾಯವನ್ನು ಮೀರಿ ತಮ್ಮ ಹೆಣ್ಣು ಮಕ್ಕಳಿಬ್ಬರನ್ನುಕುಸ್ತಿ ಚಾಂಪಿಯನ್ ಗಳನ್ನಾಗಿಸಿದ್ದರೆ,ಹರ್ಯಾಣದವರೇ ಆಗಿರುವ ಇಲ್ಲೊಬ್ಬರು ತಮ್ಮ ಕುಟುಂಬ ಸಾಂಪ್ರದಾಯಿಕವಾಗಿ ಆಡಿಕೊಂಡ ಬಂದ ಕುಸ್ತಿ ಹಾಗೂ ಕಬಡ್ಡಿ ಆಟವನ್ನು ತ್ಯಜಿಸಿ ಉರ್ದು ಸಾಹಿತ್ಯ ಕ್ಷೇತ್ರದತ್ತಸಾಗಿ ಅಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ವ್ಯಕ್ತಿ ಇದೀಗ ಒಬ್ಬ ಯಶಸ್ವೀ ಐಪಿಎಸ್ ಅಧಿಕಾರಿಯೂ ಹೌದು. ಕೊಲ್ಕತ್ತಾ ಪೊಲೀಸ್ ವಿಶೇಷ ಕಾರ್ಯ ಪಡೆಯ ಡಿಸಿಪಿ ಆಗಿರುವ ಮುರಳೀಧರ ಶರ್ಮ ಇದೀಗ ತಮ್ಮ ಉರ್ದು ಶಾಯಿರಿಯ ಗೊಂಚಲು ‘‘ಹಾಸಿಲ್ ಇ ಸಹ್ರನವರ್ದಿ’’ ಬಿಡುಗಡೆಗೊಳಿಸಲು ಸಿದ್ಧರಾಗಿದ್ದಾರೆ.
ಟೀ ಸ್ಟಾಲ್ ಹೊಂದಿದ್ದ ದಿ.ಜೈಕಿರಣ್ ಹಾಗೂ ಗೃಹಿಣಿ ಸಂತೋಷ್ ಶರ್ಮ ಅವರ ಪುತ್ರರಾಗಿರುವ ಮುರಳೀಧರ್ ಅವರಿಗೆ ಶಾಲಾ ದಿನಗಳಿಂದಲೇ ಉರ್ದು ಸಾಹಿತ್ಯದತ್ತ ಅದೇನೋ ಆಕರ್ಷಣೆ. ಕಬಡ್ಡಿ ಪಂದ್ಯಗಳಲ್ಲಿ ಭಾಗವಹಿಸಲು ಅವರ ತಂದೆ ಅವರನ್ನು ಪ್ರೋತ್ಸಾಹಿಸಿದರೆ ಅವರು ರಾಮಲೀಲಾದಲ್ಲಿ ರಾಮನ ಪಾತ್ರ ನಿರ್ವಹಿಸಲು ಉತ್ಸುಕರಾಗಿದ್ದರು. ‘‘ಜಿಲ್ಲಾ ಮಟ್ಡದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರೂ ಕುಟುಂಬದ ಒತ್ತಡದಿಂದಾಗಿ ರಾಮಲೀಲಾದಲ್ಲಿ ಪಾತ್ರ ನಿರ್ವಹಿಸುವುದನ್ನು ಕೈಬಿಡಬೇಕಾಯಿತು’’ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಉರ್ದು ಕವಿಗಳ ಸಮ್ಮೇಳನಗಳಲ್ಲಿ ಮುರಳೀಧರ್ ಶರ್ಮ ಅವರು ಭಾಗವಹಿಸುತ್ತಿದ್ದರೂ ಅಲ್ಲಿರುವ ಯಾರಿಗೂ ಅವರು ಘಝಲ್ ಗಳನ್ನೂ ಬರೆಯುತ್ತಾರೆಂದು ತಿಳಿದಿರಲಿಲ್ಲ. ತಾವು ತಮ್ಮ ಜೀವನದಲ್ಲಿ ಎರಡು ಬಾರಿ ಪ್ರೇಮದ ಬಲೆಯಲ್ಲಿ ಬಿದ್ದಿರುವುದಾಗ ಒಪ್ಪಿಕೊಳ್ಳುವ ಮುರಳೀಧರ್, ‘‘ಮೊದಲ ಬಾರಿ ಹುಡುಗಿಯೊಬ್ಬಳ ಪ್ರೇಮದ ಬಲೆಯಲ್ಲಿ ಬಿದ್ದಾಗ ಆಕೆ ನನ್ನನ್ನು ಗಂಡನನ್ನಾಗಿಸಿದಳು, ಎರಡನೆಯ ಬಾರಿ ಉರ್ದು ಭಾಷೆಯ ಮೇಲೆ ಮೋಹಿತನಾದಾಗ ಅದು ನನ್ನನ್ನು ಕವಿಯಾಗಿಸಿತು’’ ಎನ್ನುತ್ತಾರೆ. ಅವರ ಸಾಹಿತ್ಯದ ಗೀಳು ಅವರನ್ನು ಕುಟುಂಬ ಜೀವನದಿಂದ ವಿಮುಖನನ್ನಾಗಿಸಿದೆ ಎಂದು ಪತ್ನಿ ದೂರಿದಾಗಲೆಲ್ಲಾ ಆಕೆಯ ಕೋಪವನ್ನು ಕರಗಿಸಲು ಥಟ್ಟೆಂದು ಹನಿಗವನವನ್ನು ಅವರು ವಾಚಿಸುತ್ತಾರೆ.
ಶರ್ಮ ಅವರಿಗೆ ಉರ್ದು ಶಾಯಿರಿಯೆಂದರೆ ಅದೆಷ್ಟು ಇಷ್ಟವೆಂದರೆ ಹಲವಾರು ಬಾರಿ ಕರ್ತವ್ಯದಲ್ಲಿರುವಾಗಲೂ ಅವರು ತಮ್ಮ ಸ್ಮಾರ್ಟ್ ಫೋನಿನಲ್ಲಿ ಕವನ ಗೀಚುವುದನ್ನು ಕಾಣಬಹುದು.







