ಇಷ್ಟರವರೆಗೆ ಬಿಜೆಪಿಗೆ ಪೂರಕ ಪರಿಸ್ಥಿತಿ : ರಾಜದೀಪ್ ಸರ್ದೇಸಾಯಿ ಅಂದಾಜು
ಉತ್ತರ ಪ್ರದೇಶ ಚುನಾವಣೆ ಮೂರನೇ ಹಂತ ಮುಕ್ತಾಯ

ನಿರ್ಣಾಯಕವಾದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಈಗಾಗಲೇ ಅರ್ಧದಷ್ಟು ಮುಗಿದಿದೆ. 20 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಬೇರೂರಿರುವ ತೀವ್ರ ಜಾತಿ,ಕೋಮು ಭೇದಗಳಿಂದಾಗಿ ಇಲ್ಲಿ ಚುನಾವಣಾ ವಿಶ್ಲೇಷಣೆ ಸುಲಭವಲ್ಲ ಎನ್ನುತ್ತಾರೆ ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ. ರಾಜ್ಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕಿಸಿರುವ ಅವರು ಮೂರನೆ ಹಂತದ ಮತದಾನದ ಬಳಿಕ ಬಿಜೆಪಿಗೆ ಪೂರಕ ಸ್ಥಿತಿ ಕಂಡುಬರುತ್ತಿದೆ ಎಂದು ಅಂದಾಜಿಸಿದ್ದಾರೆ. ಅವರ ಸಮೀಕ್ಷಾ ವರದಿ ಇಲ್ಲಿದೆ.
ಅರ್ಧ ಚುನಾವಣೆಯ ಬಳಿಕ ಬಿಜೆಪಿ ಮೇಲುಗೈ ಹೊಂದಿರುವಂತಿದೆ. ಹೆಚ್ಚು ಕಡಿಮೆ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಬಿಜೆಪಿ ಸ್ಪರ್ಧೆಯಲ್ಲಿದೆ. ತಾನು ಹೊಂದಿರುವ ಸಾಮಾಜಿಕ ಪ್ರಭಾವದಿಂದಾಗಿ ತನ್ನ ಎದುರಾಳಿಗಳಿಗಿಂತ ಕೊಂಚ ಮುಂದಿದೆ.
2014ರ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿದ್ದ ಮೋದಿ ಅಲೆ ಈಗ ಕಂಡು ಬರುತ್ತಿಲ್ಲ. ಆದರೆ ಪ್ರಧಾನಿ ಮುಸ್ಲಿಮರನ್ನು ಹೊರತುಪಡಿಸಿ ಇತರ ಜಾತಿಗಳು ಮತ್ತು ಸಮುದಾಯಗಳಲ್ಲಿ ಈಗಲೂ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಪ್ರಬಲ, ವಿಶ್ವಾಸಾರ್ಹ ಸ್ಥಳಿಯ ನಾಯಕತ್ವವನ್ನು ರೂಪಿಸುವಲ್ಲಿ ವೈಫಲ್ಯ ಪಕ್ಷದ ದೌರ್ಬಲ್ಯವಾಗಿಯೇ ಉಳಿದುಕೊಂಡಿದೆಯಾದರೂ ಮೋದಿ ಪಕ್ಷಕ್ಕಿಂತ ಹೆಚ್ಚಿನ ಆಕರ್ಷಣೆಯನ್ನು ಕಾಯ್ದು ಕೊಂಡಿದ್ದಾರೆ.
ಅಖಿಲೇಶ್ ಯಾದವ ತನ್ನದೇ ಆದ ರೀತಿಯಲ್ಲಿ ಉತ್ತರ ಪ್ರದೇಶದ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಅವರ ವಿರುದ್ಧ ಜನರಿಗೆ ಹೆಚ್ಚಿನ ಕೋಪವಿಲ್ಲದಿದ್ದರೂ ಅವರ ಶಾಸಕರು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಯುವಜನರಲ್ಲಿ ಅಖಿಲೇಶ್ ಜನಪ್ರಿಯರಾಗಿದ್ದು ಅವರನ್ನು ಭವಿಷ್ಯದ ಮುಖವೆಂಬಂತೆ ಕಾಣಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರಮುಖ ಸಮಸ್ಯೆಯಾಗಿದೆಯಾದರೂ ಅಖಿಲೇಶ್‌ರನ್ನು ಅಭಿವೃದ್ಧಿಯ ಗುರಿ ಹೊಂದಿರುವ ನಾಯಕನೆಂದು ಪರಿಗಣಿಸಲಾಗಿದೆ.
ಕಾಂಗ್ರೆಸ್ ಪಕ್ಷವು ಎಸ್‌ಪಿಯೊಡನೆ ಮೈತ್ರಿ ಮಾಡಿಕೊಂಡಿದೆಯಾದರೂ ಈ ಮೈತ್ರಿಯಲ್ಲಿನ ದುರ್ಬಲ ಕೊಂಡಿ ಆ ಪಕ್ಷವೇ ಆಗಿದೆ. ಕಾಂಗ್ರೆಸ್‌ಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿರುವುದು ಅಧಿಕಾರಕ್ಕಾಗಿ ನಿಕಟ ಹಣಾಹಣಿ ಏರ್ಪಟ್ಟಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಅಗಿದ್ದಂತೆ ಎಸ್‌ಪಿಗೆ ದುಬಾರಿಯಾಗಬಹುದು. ರಾಹುಲ್ ಗಾಂಧಿಯವರು ಶ್ರದ್ಧೆಯಿಂದ ಪ್ರಚಾರದಲ್ಲಿ ಭಾಗಿಯಾಗಿದ್ದಾರಾದರೂ ಹಿಂದಿ ಭಾಷಿಕ ಪ್ರದೇಶದ ನಾಯಕನಾಗಿ ಜನರ ಭಾವನೆಗಳನ್ನು ಮೀಟುವಲ್ಲಿ ವಿಫಲರಾಗಿದ್ದಾರೆ.
ಈ ಮಧ್ಯೆ ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿಯವರು ಮತದಾರರನ್ನು ಸೆಳೆಯಲು ಹೆಣಗಾಡುತ್ತಿದ್ದಾರೆ. ಅವರ ಜಾಟವ್ ಮತಗಳು ಸುಭದ್ರವಾಗಿವೆ,ಆದರೆ ಈ ಹಿಂದೆ...ವಿಶೇಷವಾಗಿ 2007ರಲ್ಲಿ ತನ್ನ ಯಶಸ್ಸಿನಲ್ಲಿ ನಿರ್ಣಾುಯಕ ಪಾತ್ರ ವಹಿಸಿದ್ದ ಇತರರ ಮತಗಳನ್ನು ಆಕರ್ಷಿಸುವಲ್ಲಿ ವಿಫಲರಾಗುತ್ತಿದ್ದಾರೆ. ಬಿಜೆಪಿ ದಿಲ್ಲಿಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ನ ಮಾತುಗಳನ್ನಾಡುತ್ತದೆ. ಆದರೆ ವಾಸ್ತವದಲ್ಲಿ ಉ.ಪ್ರದೇಶದಲ್ಲಿ ಅದರ ಚುನಾವಣಾ ಪ್ರಚಾರವು ಹಿಂದು-ಮುಸ್ಲಿಮ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನವಾಗಿ ಧ್ರುವೀಕರಣದತ್ತ ಸಾಗುತ್ತಿದೆ. ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಅದರ ಪ್ರಚಾರವು ಹೆಚ್ಚೆಚ್ಚು ಕೋಮುಬಣ್ಣ ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್-ಎಸ್‌ಪಿ ಮೈತ್ರಿಕೂಟವು ಮುಸ್ಲಿಮ್ ಮತಗಳನ್ನು ಗಣನೀಯವಾಗಿ ಕ್ರೋಢಿಕರಿಸಿದೆ. ಮೈತ್ರಿಕೂಟವು ಮುಸ್ಲಿಮ-ಯಾದವ ಮತಗಳ ಭದ್ರ ಬುನಾದಿಯನ್ನು ಹೊಂದಿದೆಯಾದರೂ ಇನ್ನಷ್ಟು ಮತದಾರರ ಬೆಂಬಲ ಗಳಿಸಲು ಶ್ರಮಿಸುತ್ತಿದೆ. ತನ್ನ ಸಾಂಪ್ರದಾಯಿಕವಾದ ಮೇಲ್ಜಾತಿಗಳ ಮತಗಳನ್ನು ಮೈತ್ರಿಕೂಟದ ಎಸ್‌ಪಿ ಅಭ್ಯರ್ಥಿಗಳಿಗೆ ಬೀಳುವಂತೆ ಮಾಡುವುದು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.
ಎಸ್‌ಪಿಯಲ್ಲಿನ ಯಾದವೀ ಕಲಹವು ಸೈಕಲ್ ಮತ್ತು ಅಖಿಲೇಶ್‌ರೊಂದಿಗೆ ಅಂಟಿಕೊಂಡಿರುವ ಯಾದವರ ಮೇಲೆ ಸೀಮಿತ ಪರಿಣಾಮವನ್ನು ಹೊಂದಿದೆ. ಯಾದವ ಮತಗಳನ್ನು ವಿಭಜಿಸುವ ಶಿವಪಾಲ್ ಯಾದವ ಅವರ ಪ್ರಯತ್ನ ಯಶಸ್ಸು ಕಂಡಿಲ್ಲ.
ನೋಟು ಅಮಾನ್ಯದ ಬಳಿಕವೂ ನಗರ ಪ್ರದೇಶಗಳಲ್ಲಿ ಬಿಜೆಪಿಯ ಪ್ರಮುಖ ಮೂಲವಾದ ಮೇಲ್ಜಾತಿಗಳ ಮತ್ತು ವ್ಯಾಪಾರಿಗಳ ಮತಬ್ಯಾಂಕ್ ಭದ್ರವಾಗಿದೆ. ಹೆಚ್ಚಿ ನ ಸಂಖ್ಯೆಯಲ್ಲಿರುವ ವೌರ್ಯ,ನಿಷಾಧ ಸಮುದಾಯಗಳಂತಹ ಅತ್ಯಂತ ಹಿಂದುಳಿದ ವರ್ಗ(ಇಬಿಸಿ)ಗಳಿಂದ ಹೆಚ್ಚುವರಿಯಾಗಿ ಅದು ಮತಗಳನ್ನು ಗಳಿಸಲಿದೆ. ಇದು ಯಾದವೇತರ ಒಬಿಸಿಯಾಗಿದ್ದು ಬಿಜೆಪಿಯ ಪ್ರಮುಖ ಮತಬ್ಯಾಂಕ್ ಆಗಿ ಹೊರಹೊಮ್ಮುತ್ತಿದೆ.
ಮೂರು ಹಂತಗಳ ಮತದಾನದ ಬಳಿಕ ಬಿಜೆಪಿ ಮತ್ತು ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟಗಳಿಗೆ ದಕ್ಕಿರಬಹುದಾದ ಸ್ಥಾನಗಳ ಸಂಖ್ಯೆ ಸರಿಸುಮಾರು ಒಂದೇ ಆಗಿರಬಹುದು. ಪೂರ್ವ ಉತ್ತರ ಪ್ರದೇಶ ಈಗ ನಿರ್ಣಾಯಕವಾಗಿದೆ. ಅಲ್ಲಿ ತನ್ನ ಹಿಂದು,ಯಾದವೇತರ ಒಬಿಸಿ/ಇಬಿಸಿ ಮತ್ತು ಮೇಲ್ಜಾತಿಗಳ ಮತಗಳ ಕ್ರೋಢಿಕರಣಕ್ಕೆ ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಕಾಂಗ್ರೆಸ್,ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೆ ಮೈತ್ರಿಕೂಟದ ಹೋರಾಟಕ್ಕೆ ಬಲ ಸಿಗಲಿದೆ. ಈಗಿನ ಪ್ರವೃತ್ತಿಯೇ ಮುಂದುವರಿದರೆ ತ್ರಿಶಂಕು ವಿಧಾನಸಭೆ ಏರ್ಪಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ ಮಾಯಾವತಿಯವರ ಪಕ್ಷ ಜಾರುತ್ತ ಸಾಗಿದರೆ ಫಲಿತಾಂಶಗಳು ಪ್ರಕಟಗೊಂಡಾಗ ಸ್ಪಷ್ಟ ಬಹುಮತದ ಪಕ್ಷವೊಂದು ಹೊರಹೊಮ್ಮ ಬಹುದು. ಸದ್ಯಕ್ಕೆ ಬಿಜೆಪಿ ಉತ್ತಮ ಸ್ಥಿತಿಯಲ್ಲಿರುವಂತೆ ಕಂಡು ಬರುತ್ತಿದ್ದೆಯಾದರೂ ಅಖಿಲೇಶ್ -ರಾಹುಲ್ ಜೋಡಿ ಮತಗಳನ್ನು ಬೇಟೆಯಾಡಲು ತೀವ್ರವಾಗಿ ಶ್ರಮಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಗಳು ಸದಾ ಸಂಕೀರ್ಣ ವಾಗಿದ್ದು, ಇದಮಿತ್ಥಂ ಎಂದು ಭವಿಷ್ಯ ನುಡಿಯಲು ಯಾವುದೇ ರಾಜಕೀಯ ಪಂಡಿತರಿಗೂ ಸಾಧ್ಯವಿಲ್ಲ ಎನ್ನುವ ಸರ್ದೇಸಾಯಿ, 2007 ಮತ್ತು 2012ರಲ್ಲಿ ಉತ್ತರಪ್ರದೇಶ ಕುರಿತು ತನ್ನ ಅಂದಾಜುಗಳು ಸರಿಯಾಗಿದ್ದವು,ಹೀಗಾಗಿ ಹ್ಯಾಟ್ರಿಕ್‌ಗಾಗಿ ಪ್ರಯತ್ನಿಸಿದ್ದೇನೆ. ಆದರೆ ಅವೆರೆಡೂ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆಗಳಿದ್ದ ಚುನಾವಣೆಗಳಾಗಿದ್ದವು, ಆದರೆ ಈಗಿನದು ಹಾಗಿಲ್ಲ. ಹೀಗಾಗಿ ಮಾ.10ರಂದು ಮತದಾನದ ಎಲ್ಲ ಸುತ್ತುಗಳು ಪೂರ್ಣಗೊಂಡನಂತರ ನಮ್ಮ ಅಂತಿಮ ತೀರ್ಪನ್ನು ಹೇಳುತ್ತೇವೆ ಎಂದಿದ್ದಾರೆ.







