ಶಾಸಕ ಲೋಬೊ ಹೇಳಿಕೆಗೆ ಯುನಿವೆಫ್ ಖಂಡನೆ
ಮಂಗಳೂರು, ಫೆ.20: ಶಾಸಕರಾಗುವ ಮೊದಲು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವಿದ್ಯಾವಂತರೆನಿಸಿಕೊಂಡಿರುವ ಶಾಸಕ ಜೆ.ಆರ್.ಲೋಬೊ ರವಿವಾರ ಶಿವಾಜಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಶಿವಾಜಿ ಇಲ್ಲದಿರುತ್ತಿದ್ದರೆ ಕಾಶಿಯ ಸಂಸ್ಕೃತಿ ನಾಶವಾಗುತ್ತಿತ್ತು, ಮಥುರಾ ಮಸೀದಿಯಾಗುವ ಸಾಧ್ಯತೆಯಿತ್ತು ಎಂದು ಹೇಳಿರುವುದು ಇತಿಹಾಸಕ್ಕೆ ಮಾಡಿದ ಅಪಮಾನ. ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ ಸಮಾಜವು ಧ್ರುವೀಕರಣಗೊಳ್ಳುತ್ತಿದ್ದು ತನ್ನ ಕುರ್ಚಿಯ ಉಳಿವಿಗಾಗಿ, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇತಿಹಾಸವನ್ನು ತಿರುಚುವಂತಹ ಈ ರೀತಿಯಾದ ಹೇಳಿಕೆಯನ್ನು ಯುನಿವೆಫ್ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಭಾರತದಲ್ಲಿ ಶಾಸಕ, ಸಂಸದರಾಗುವವರಿಗೆ ಇತರೆಲ್ಲಾ ಅರಿವಿಗಿಂತ ಇತಿಹಾಸದ ಜ್ಞಾನ ಬಹಳ ಅಗತ್ಯ. ಆದುದರಿಂದ ನಮ್ಮ ಶಾಸಕರು ಇತಿಹಾಸವನ್ನು ಅಧ್ಯಯನ ಮಾಡಲಿ. ಇಂತಹ ಹೇಳಿಕೆಯು ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಂಟಿಕೊಂಡಿರುವ 'ಮೃದು ಹಿಂದುತ್ವವಾದಿ'ಗಳೆಂಬ ಆರೋಪಕ್ಕೆ ಪುಷ್ಟಿ ನೀಡುತ್ತದೆ. ಕಾಂಗ್ರೆಸ್‌ನ ನಾಯಕರು ಲೋಬೋರ ಈ ಹೇಳಿಕೆಯ ಹಿಂದಿನ ಮರ್ಮವನ್ನು ಅರಿತು ಅವರನ್ನು ಎಚ್ಚರಿಸುವಂತೆ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







