ಮಡಿಕೇರಿ: ಗಿರಿಜನ ಆಶ್ರಮ ಶಾಲೆಗಳ ಉನ್ನತೀಕರಣಕ್ಕೆ ಒತ್ತಾಯಿಸಿ ಧರಣಿ

ಮಡಿಕೇರಿ ಫೆ.20: ಕೊಡಗಿನಲ್ಲಿರುವ ಗಿರಿಜನ ಆಶ್ರಮ ಶಾಲೆಗಳನ್ನು ಕೇರಳ ಮಾದರಿಯಲ್ಲಿ ಉನ್ನತೀಕರಿಸಬೇಕೆಂದು ಒತ್ತಾಯಿಸಿ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಗಿರಿಜನ ಆಶ್ರಮ ಶಾಲಾ ಪೋಷಕರ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಜಿಲ್ಲೆಯಲ್ಲಿರುವ ಗಿರಿಜನ ಆಶ್ರಮ ಶಾಲೆಗಳನ್ನು ಕಡೆಗಣಿಸಲಾಗಿದ್ದು, ಆದಿವಾಸಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ , ಆಹಾರ, ಆರೋಗ್ಯ, ಭದ್ರತೆ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಒಕ್ಕೂಟದ ಕಾರ್ಯದರ್ಶಿ ಶೈಲೇಂದ್ರ ಮಾತನಾಡಿ, ರಾಜ್ಯದಲ್ಲಿ 116 ಗಿರಿಜನ ಆಶ್ರಮ ಶಾಲೆಗಳಿದ್ದು, ಕೊಡಗು ಜಿಲ್ಲೆಯಲ್ಲಿ ಇವುಗಳ ಸಂಖ್ಯೆ 12 ಇದೆ.ಈ ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಣೆಯಾಗುತ್ತಿದೆ ಮತ್ತು ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿದೆಯೆಂದು ಆರೋಪಿಸಿದರು.
ಆಶ್ರಮ ಶಾಲೆಗಳ ಶೋಚನೀಯ ಪರಿಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆೆಯಲಾಗಿದ್ದರು ಇಲ್ಲಿಯವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಬುಡಕಟ್ಟು ವಿದ್ಯಾರ್ಥಿಗಳ ಮತ್ತು ಆಶ್ರಮ ಶಾಲೆಗಳ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಕೇರಳ ಮಾದರಿಯಲ್ಲಿ ಆಶ್ರಮ ಶಾಲೆಗಳನ್ನು ಉನ್ನತೀಕರಿಸುವುದಾಗಿ ಸರ್ಕಾರ ಭರವಸೆ ನೀಡುತ್ತಿದೆಯೇ ಹೊರತು ಅನುಷ್ಠಾನ ಗೊಳಿಸುವ ಕಾಳಜಿಯನ್ನು ತೋರುತ್ತಿಲ್ಲ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಆಶ್ರಮ ಶಾಲೆಗಳ ಉನ್ನತೀಕರಣಕ್ಕೆ ವಿಶೇಷ ಕಾಳಜಿಯನ್ನು ಸರ್ಕಾರ ತೋರಬೇಕೆಂದು ಶೈಲೇಂದ್ರ ಒತ್ತಾಯಿಸಿದರು.
ಪೋಷಕರ ವೇದಿಕೆಯ ಅಧ್ಯಕ್ಷರಾದ ಲಕ್ಷ್ಮೀ ಮಾತನಾಡಿ, ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿರುವ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇತರ ವಿಚಾರಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಾರೆಯೆ ಹೊರತು ಮಕ್ಕಳ ಶೈಕ್ಷಣಿಕ ಬೆಳವಣಿಗೆಯತ್ತ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಸಂಚಾಲಕ ವೈ.ಪಿ. ತಮ್ಮಯ್ಯ, ಗಪ್ಪು ಹಳ್ಳಿಗಟ್ಟು, ಗಣೇಶ್ ಆಚಾರ್ಯ, ಪ್ರಕಾಶ್, ರಮೇಶ್, ಗಿರಿಜನ ಪ್ರಮುಖರು ಪಾಲ್ಗೊಂಡಿದ್ದರು.







