ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಧರಣಿ

ಮಂಗಳೂರು, ಫೆ.20: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿ 4 ವರ್ಷವಾದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರ ಸಂಪುಟದಲ್ಲಿ ಭ್ರಷ್ಟ ಸಚಿವರೇ ತುಂಬಿ ಹೋಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಜನತೆಗೆ ಹಲವಾರು ನಿರೀಕ್ಷೆಗಳಿದ್ದವು. ಆದರೆ ಈಗ ಆ ನಿರೀಕ್ಷೆ ಹುಸಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೊಮವಾರ ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿನ ಹೊಳೆ ಯೋಜನೆಯಲ್ಲಿ ಗುತ್ತಿಗೆದಾರರಿಂದ ಕಪ್ಪ ಪಡೆದಿದ್ದಾರೆ. ಇದು ಸಮಾಜವಾದಿಗಳ ಸರಕಾರವಲ್ಲ, ಮಜಾವಾದಿಗಳ ಸರಕಾರ. ಕಾಂಗ್ರೆಸ್ ಅಂತ್ಯ ಸಮೀಪಿಸುತ್ತಿದ್ದು, ಅದಕ್ಕೆ ಸಿದ್ದರಾಮಯ್ಯ ಕೊನೆಯ ಮೊಳೆ ಜಡಿಯಲಿದ್ದಾರೆ. ಕಾಂಗ್ರೆಸ್‌ನಿಂದ 15 ಮಂದಿ ಶಾಸಕರು ಬಿಜೆಪಿ ಸೇರಿಕೊಳ್ಳುವ ಮೂಲಕ ಕಾಂಗ್ರೆಸ್ ಸರಕಾರದ ಪತನವಾಗಲಿದೆ ಎಂದು ನಳಿನ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್ ಮಾತನಾಡಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪದಾಧಿಕಾರಿಗಳಾದ ಕಿಶೋರ್ ರೈ, ಬೃಜೇಶ್ ಚೌಟ, ಉಮಾನಾಥ ಕೋಟ್ಯಾನ್, ಸುದರ್ಶನ ಎಂ., ರಾಮಂಚಂದರ್ ಬೈಕಂಪಾಡಿ, ಉಪ ಮೇಯರ್ ಸುಮಿತ್ರಾ ಕರಿಯ, ಮಾಜಿ ಶಾಸಕ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.







