ಯೋಧರ ಪತ್ನಿಯರ ಶೀಲದ ಬಗ್ಗೆ ಪ್ರಶ್ನಿಸುವ ಮಾತಾಡಿದ ಬಿಜೆಪಿ ಬೆಂಬಲಿತ ಶಾಸಕ: ವ್ಯಾಪಕ ಆಕ್ರೋಶ

ಮುಂಬೈ,ಫೆ.20: ಬಿಜೆಪಿ ಬೆಂಬಲಿತ, ಸೋಲಾಪುರದ ವಿಧಾನ ಪರಿಷತ್ ಸದಸ್ಯ ಪ್ರಶಾಂತ ಪರಿಚಾರಕ್ ಅವರು ಯೋಧರ ಪತ್ನಿಯರ ಪಾತಿವ್ರತ್ಯವನ್ನು ಪ್ರಶ್ನಿಸಿ ನೀಡಿರುವ ಹೇಳಿಕೆಯು ವಿವಿಧ ಪೌರ ಸಂಸ್ಥೆಗಳು ಮತ್ತು ಜಿಲ್ಲಾ ಪರಿಷತ್ ಚುನಾವಣೆಗಳಿಗೆ ಮುನ್ನ ಪಕ್ಷವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ.
ಶನಿವಾರ ತನ್ನ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಪರಿಚಾರಕ್, ಇಡೀ ವರ್ಷ ತಾವು ಮನೆಗೆ ವಾಪಸಾಗಿರದಿದ್ದರೂ ತಮಗೆ ಮಕ್ಕಳಾದರೆ ಯೋಧರು ಪಂಜಾಬ್ ಗಡಿಯಲ್ಲಿ ಸಿಹಿಗಳನ್ನು ಹಂಚುತ್ತಾರೆ ಎಂಬ ಕೀಳುಮಟ್ಟದ ಮಾತನ್ನಾಡಿದ್ದರು.
ಈ ಕೀಳು ಹೇಳಿಕೆಗೆ ಸಮಾಜದ ಎಲ್ಲ ವರ್ಗಗಳಿಂದ ಟೀಕೆಗಳು ವ್ಯಕ್ತವಾಗಿವೆ. ಇಷ್ಟಾದ ಬಳಿಕ ಪಂಢರಾಪುರದಿಂದ ಹೇಳಿಕೆಯೊಂದನ್ನು ನೀಡಿರುವ ಶಾಸಕ ಪರಿಚಾರಕ್, ಯೋಧನಿಗೆ ಅಗೌರವ ತೋರಿಸುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ‘ವೈಯಕ್ತಿಕವಾಗಿ ನನಗೆ ಯೋಧರು ಮತ್ತು ಅವರ ಕುಟುಂಬಗಳ ಬಗ್ಗೆ ಗೌರವವಿದೆ. ನಾನು ಅವರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯನ್ನು ಕೋರುತ್ತೇನೆ. ಹಾಗೆ ಮಾತನಾಡಿದ್ದು ನನ್ನ ತಪ್ಪು ’ಎಂದು ಅವರು ತಿಳಿಸಿದ್ದಾರೆ.
ಪರಿಚಾರಕ್ ಅವರ ವಿವಾದಾತ್ಮಕ ಹೇಳಿಕೆಯನ್ನು ‘ಅತ್ಯಂತ ವಿಷಾದನೀಯ ಮತ್ತು ಅವಮಾನಕರ ’ಎಂದು ಇಲ್ಲಿ ಬಣ್ಣಿಸಿದ ಎಐಸಿಸಿ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು, ಪರಿಚಾರಕ್ ಕುರಿತು ತನ್ನ ನಿಲುವನ್ನು ಮತ್ತು ತಾನು ಇಂತಹ ಹೇಳಿಕೆಗಳನ್ನು ಬೆಂಬಲಿಸುತ್ತೇನೆಯೇ ಇಲ್ಲವೇ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಯೋಧರಿಗೆ ಅಗೌರವ ರಾಷ್ಟ್ರವಿರೋಧಿಯಾಗಿದೆ ಮತ್ತು ಬಿಜೆಪಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದೊಂದು ಅಸಹ್ಯ ಹೇಳಿಕೆ ಎಂದು ಬಣ್ಣಿಸಿದ ಎನ್‌ಸಿಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ವಾಘ್ ಅವರು, ಶಾಸಕರು ಸೇನೆಯನ್ನು ಅವಮಾನಿಸಿದ್ದಾರೆ. ಇದು ಬಿಜೆಪಿಯನ್ನು ಬಯಲುಗೊಳಿಸುತ್ತಿದೆ, ಅದು ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಈ ವಿಷಯದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ ಬಿಜೆಪಿಯ ರಾಜ್ಯ ಮುಖ್ಯವಕ್ತಾರ ಮಾಧವ ಭಂಡಾರಿ ಅವರು, ಪರಿಚಾರಕ್ ಪಕ್ಷದೊಂದಿಗೆ ನೇರ ಸಂಬಂಧ ಹೊಂದಿಲ್ಲ ಎಂದು ಹೇಳಿದರು.
ಬೃಹನ್ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ 10 ಪೌರಸಂಸ್ಥೆಗಳು ಮತ್ತು 15 ಜಿಲ್ಲಾ ಪರಿಷತ್‌ಗಳ ಚುನಾವಣೆ ಮಂಗಳವಾರ,ಫೆ.21ರಂದು ನಡೆಯಲಿದ್ದು, ಪರಿಚಾರಕ್ ಅವರ ಹೇಳಿಕೆ ಬಿಜೆಪಿಗೆ ದುಬಾರಿಯಾಗಬಹುದು. 2016,ಅಕ್ಟೋಬರ್‌ನಲ್ಲಿ ಸೇನೆಯು ನಡೆಸಿದ್ದ ಸರ್ಜಿಕಲ್ ದಾಳಿಯನ್ನು ತನ್ನ ಮುಖ್ಯ ಚುನಾವಣಾ ಭೂಮಿಕಯನ್ನಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಹೆಚ್ಚಿನ ಸೇನಾ ಸಿಬ್ಬಂದಿಗಳು ಸತಾರಾ,ಕೊಲ್ಲಾಪುರ ಮತ್ತು ಸಾಂಗ್ಲಿಯಂತಹ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಮಂಗಳವಾರ ಇಲ್ಲಿ ಮತದಾನ ನಡೆಯಲಿದೆ.







