ಹೈಕಮಾಂಡ್ ಹಣದ ಬಲದಿಂದ ಸಿದ್ಧರಾಮಯ್ಯ ಆಡಳಿತ: ಸುನೀಲ್

ಉಡುಪಿ, ಫೆ.20: ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಸಿದ್ಧ ರಾಮಯ್ಯ ಹೈಕಮಾಂಡಿಗೆ ಒಂದು ಸಾವಿರ ಕೋಟಿ ಹಣ ನೀಡಿದ್ದಾರೆಂಬ ಆರೋಪ ಕೇಳಿಬರುತ್ತಿವೆ. ಸಿದ್ದರಾಮಯ್ಯ ಜನರ ಆಶೀರ್ವಾದದಿಂದಾಗಲಿ ಶಾಸಕರ ಬಹುಮತದ ಬೆಂಬಲದಿಂದಾಗಲಿ ಆಡಳಿತ ನಡೆಸುವ ಬದಲು ಹೈಕಮಾಂಡಿಗೆ ನೀಡಿರುವ ಹಣದ ಬಲದಿಂದ ಅಧಿಕಾರ ನಡೆಸುತ್ತಿದ್ದಾರೆ ಎಂಬುದು ನಾಚಿಕೆಗೇಡು ಎಂದು ರಾಜ್ಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ದ್ದೇಶಿಸಿ ಅವರು ಮಾತನಾಡುತಿದ್ದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ 12 ಲಕ್ಷ ಕುಟುಂಬ ಬಿಪಿಎಲ್ ಕಾರ್ಡ್ ರದ್ದಾಗಿದೆ. ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮರಳಿನ ಸಮಸ್ಯೆಯಿಂದ ಜನ ದಂಗೆ ಏಳು ಸ್ಥಿತಿ ನಿರ್ಮಾಣವಾಗಿದೆ. ಜಾತಿ ಗಣತಿಗಾಗಿ 200 ಕೋಟಿ ರೂ. ವೆಚ್ಚ ಮಾಡಿ ಜಾತಿಯ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಯಿತು. ಒಟ್ಟಾರೆ ಇಡೀ ಸರಕಾರ ಜೀವಂತ ಶವವಾಗಿದೆ. ಆದುದರಿಂದ ಸಿದ್ಧರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯವನ್ನು ಉಳಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷ ಭಾರತಿ ಶೆಟ್ಟಿ, ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬಿಜೆಪಿ ಮುಖಂಡರಾದ ಸುಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಕುಯಿಲಾಡಿ ಸುರೇಶ್ ನಾಯಕ್, ಸುಪ್ರಸಾದ್ ಶೆಟ್ಟಿ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಪ್ರಭಾಕರ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ನಯನ ಗಣೇಶ್, ಶಿಲ್ಪಾ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಸಲೀಂ ಅಂಬಾಗಿಲು ಉಪಸ್ಥಿತರಿದ್ದರು.







