ವಿದ್ಯುತ್ ದರ ಏರಿಕೆಗೆ ಸರಕಾರದ ಸಿದ್ಧತೆ?

ಬೆಂಗಳೂರು, ಫೆ.20: ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಮತ್ತೊಂದು ವಿದ್ಯುತ್ ದರ ಏರಿಕೆಯ ಹೊರೆ ಹೊರಿಸಲು ರಾಜ್ಯ ಸರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಬರಗಾಲ, ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಎಸ್ಕಾಂಗಳು ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿದೆ. ಆದರೆ, ಗ್ರಾಹಕರಿಂದ ಸಂಗ್ರಹವಾಗುತ್ತಿರುವ ಮೊತ್ತ ಕಡಿಮೆ ಇರುವುದರಿಂದ, ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡಲು ಕೆಇಆರ್‌ಸಿ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಕೆಇಆರ್‌ಸಿ ಅಧ್ಯಕ್ಷ ಶಂಕರಲಿಂಗೇಗೌಡ ಜೊತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಸರಕಾರದ ಅಭಿಪ್ರಾಯವನ್ನು ಕೆಇಆರ್‌ಸಿ ಅಧ್ಯಕ್ಷರಿಗೆ ತಿಳಿಸಲಾಗಿದೆ. ರಾಜ್ಯವು ಹಿಂದೆಂದೂ ಕಾಣದಂತಹ ಬರಗಾಲದಿಂದ ಬಳಲುತ್ತಿದೆ ಎಂದರು.
ರಾಜ್ಯದಲ್ಲಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಮುಕ್ತ ಮಾರುಕಟ್ಟೆಯ ಮೊರೆ ಹೋಗಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಗ್ರಾಹಕರಿಗೂ ದುಬಾರಿ ಯಾಗ ಬಾರದು, ವಿದ್ಯುತ್ ಸರಬರಾಜು ಕಂಪೆನಿಗಳಿಗೂ ನಷ್ಟವಾಗಬಾರದು ಎಂಬ ನಿಲುವನ್ನು ಸರಕಾರ ಹೊಂದಿದೆ ಎಂದು ಅವರು ಹೇಳಿದರು.
ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಕೆಇಆರ್‌ಸಿ ಈಗಾಗಲೆ ಎಲ್ಲ ಶಾಸಕರಿಗೆ ಪತ್ರ ಬರೆದು ಅಭಿಪ್ರಾಯ ಸೂಚಿಸುವಂತೆ ತಿಳಿಸಿದೆ. ಶಾಸಕರು ಇಂದಿನಿಂದ ಆಯೋಗದ ಮುಂದೆ ಹಾಜರಾಗಿ ವಿದ್ಯುತ್ ದರ ಏರಿಕೆ ಬೇಕೆ, ಬೇಡವೆ ಎಂಬ ಅಭಿಪ್ರಾಯವನ್ನು ಮಂಡಿಸಬಹುದಾಗಿದೆ ಎಂದು ಶಿವಕುಮಾರ್ ತಿಳಿಸಿದರು.







