ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ
ಪುತ್ತೂರು, ಫೆ.20: ವೆಬ್‌ಸೈಟ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಉದ್ಯೋಗ ಸಿಗಬಹುದೆನ್ನುವ ನಂಬಿಕೆಯಿಂದ ಹಣ ನೀಡಿ ಸಾವಿರಾರು ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಘಟನೆ ನಡೆದಿದ್ದು, ಈ ಕುರಿತು ಇದೀಗ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಕಬಕ ನಿವಾಸಿ ಪರಮೇಶ್ವರ ಭಟ್ ಅವರ ಪುತ್ರ ಮುರಳೀಧರ್ ವಂಚನೆಗೊಳಗಾದವರು ಎಂದು ಗುರುತಿಸಲಾಗಿದೆ.
ಮುರಳೀಧರ್ ಅವರು ವೆಬ್‌ಸೈಟ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲದಿನಗಳ ಬಳಿಕ ಅವರ ಮೊಬೈಲ್‌ಗೆ ಕರೆ ಮಾಡಿ ಉದ್ಯೋಗ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ವಂಚಕರು, ಬಳಿಕ ಹಲವಾರು ಬಾರಿ ಕರೆ ಮಾಡಿ ಉದ್ಯೋಗ ಮಾಡಿ ಕೊಡಲು ಹಣ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ನಂಬಿಸಿದ್ದರು. ಅವರು ತಿಳಿಸಿದಂತೆ ಮುರಳೀಧರ್ ಅವರು 85 ಸಾವಿರ ರೂ. ಹಣವನ್ನು ಅವರು ತಿಳಿಸಿದ ಬ್ಯಾಂಕ್ ಅಕೌಂಟಿಗೆ ಜಮೆ ಮಾಡಿದ್ದರು.
ಇದಾದ ಬಳಿಕ ಮತ್ತೆ ಕರೆ ಮಾಡತೊಡಗಿದ ವಂಚಕರು ಉದ್ಯೋಗ ರೆಡಿಯಾಗಿದ್ದು, ಮತ್ತೆ 80 ಸಾವಿರ ರೂ. ಬ್ಯಾಂಕ್ ಅಕೌಂಟಿಗೆ ಜಮೆ ಮಾಡಬೇಕೆಂದು ಕೇಳಿಕೊಂಡಿದ್ದರು.
ಇದರಿಂದಾಗಿ ಸಂಶಯಗೊಂಡ ಮುರಳೀಧರ್ ಅವರು ಇದೀಗ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿ ರೂ.85 ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





