ಶಾಂತಿ ಸೌಹಾರ್ದ ಸಮಾಜ ನಿರ್ಮಾಣವಾಗಬೇಕು: ಜೆ.ಆರ್.ಲೋಬೊ

ಉಳ್ಳಾಲ, ಫೆ.20: ಧರ್ಮಗಳ ಮಧ್ಯೆ ಮನುಷ್ಯ ಸೃಷ್ಟಿಸಿದ ಗೋಡೆಯನ್ನು ಕಿತ್ತು ಹಾಕಿ ಎಲ್ಲ ಧರ್ಮ ಸಾರುವ ತತ್ವಗಳ ಕಲ್ಪನೆಯನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಉತ್ತಮ ಶಾಂತಿ ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ತೊಕ್ಕೊಟ್ಟುವಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಹಾಶಿವರಾತ್ರಿಯ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಆಯೋಜಿಸಿದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗದ ಪ್ರದರ್ಶನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡಿಗೆ ಬಹಳಷ್ಟು ಧರ್ಮಪ್ರಚಾರಕರು ಬಂದರೂ ಯಾರು ಧರ್ಮವನ್ನು ಸ್ಥಾಪನೆ ಮಾಡಲು ಮುಂದಾಗದೆ ಅದರ ಬದಲು ಸಮಾಜದಲ್ಲಿರುವ ಸಮಸ್ಯೆಗಳನ್ನು ಬೋಧನೆಯ ಮೂಲಕ ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಸಮಾಜದ ಉದ್ದಾರಕ್ಕೆ ಶ್ರಮಿಸಿದರು. ಆದರೆ ಅದರ ನಂತರ ಬಂದ ಅವರ ಅನುಯಾಯಿಗಳು ಧರ್ಮ ಎಂಬ ಹೆಸರಿನಲ್ಲಿ ಗೋಡೆಗಳನ್ನು ಕಟ್ಟಲು ಶುರುಮಾಡಿದರು. ಭಗವಂತ ಒಬ್ಬನೇ ಆದರೆ ಅವರ ನಾಮ ಹಲವು ಈ ನಿಟ್ಟಿನಲ್ಲಿ ಎಲ್ಲ ಧರ್ಮಗಳು ಸಾರಿದ ಒಳ್ಳೆಯ ವಿಚಾರಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ವಹಿಸಿದ್ದರು. ನಗರಸಭೆ ಸದಸ್ಯ ಬಾಝಿಲ್ ಡಿಸೋಜಾ, ಶ್ರೀ ಕ್ಷೇತ್ರ ಸೋಮೇಶ್ವರದ ಆಡಳಿತಾಧಿಕಾರಿ ಹಾಗೂ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ ಯೋಗೀಶ್.ಹೆಚ್.ಆರ್, ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ. ಕೆ. ಸುಧೀರ್ ಕಾಸರಗೋಡು ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮೀ , ತೊಕ್ಕೊಟ್ಟು ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಪಾರ್ವತಿ ಭಾಗವಹಿಸಿದ್ದರು.
ಬಿಜೈ ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಅಂಬಿಕಾ ಸ್ವಾಗತಿಸಿದರು. ಮಂಗಳೂರು ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ವಿಶ್ವೇಶ್ವರಿ ಕಾರ್ಯಕ್ರಮ ನಿರ್ವಹಿಸದರು. ಸುರತ್ಕಲ್ ಕೇಂದ್ರದ ಸಂಚಾಲಕಿ ಬ್ರಹ್ಮಾಕುಮಾರಿ ಪ್ರಭಾ ವಂದಿಸಿದರು.







