ತ.ನಾ.: 500 ಸರಕಾರಿ ಮದ್ಯದಂಗಡಿ ಬಂದ್ : ನೂತನ ಮುಖ್ಯಮಂತ್ರಿ ಪಳನಿಸ್ವಾಮಿ ಆದೇಶ

ಚೆನ್ನೈ, ಫೆ.20: ಶನಿವಾರ ವಿಶ್ವಾಸಮತ ಗೆದ್ದಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಸೋಮವಾರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ 500ಕ್ಕೂ ಅಧಿಕ ಸರಕಾರಿ ಮದ್ಯದಂಗಡಿಗಳ ಮುಚ್ಚುಗಡೆ ಸೇರಿದಂತೆ ಮಹತ್ವದ ಕೆಲವು ನಿರ್ಧಾರಗಳನ್ನು ಪ್ರಕಟಿಸಿದರು.
2016ರ ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆ ನಾಯಕಿ ಜಯಲಲಿತಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ಆದೇಶ ನೀಡುವ ಐದು ಕಡತಗಳಿಗೆ ಪಳನಿಸ್ವಾಮಿ ಸಹಿಹಾಕಿದರು.
ತಮಿಳುನಾಡು ಸರಕಾರದಿಂದ ಎರಡನೆ ಕಂತಿನ ಮದ್ಯದಂಗಡಿಗಳ ನಿಷೇಧ ಇದಾಗಿದೆ. 2016ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಮತ್ತೆ ಅಧಿಕಾರಕ್ಕೇರಿದ ಬಳಿಕ 200ಕ್ಕೂ ಅಧಿಕ ಸರಕಾರಿ ಮದ್ಯದಂಗಡಿಗಳನ್ನು ಮುಚ್ಚುಗಡೆ ಗೊಳಿಸಿದ್ದರು.
ಕಳೆದ ಒಂದು ಶತಮಾನದಲ್ಲೇ ಅತ್ಯಂತ ಘೋರವಾದ ಬರಪರಿಸ್ಥಿತಿಯನ್ನು ತಮಿಳುನಾಡು ಎದುರಿಸುತ್ತಿದ್ದು, ರೈತರಿಗೆ ಬರಪರಿಹಾರವನ್ನು ನೀಡುವ ಕುರಿತಾದ ಆದೇಶಕ್ಕೂ ಪಳನಿಸ್ವಾಮಿ ಸಹಿಹಾಕಿದ್ದಾರೆ.
ಬರಪರಿಹಾರ ನನ್ನ ಪ್ರಥಮ ಆದ್ಯತೆಯಾಗಿದ್ದು, ರೈತರಿಗೆ ಅತ್ಯಂತ ತ್ವರಿತವಾಗಿ ನೆರವನ್ನು ತಲುವಂತೆ ಮಾಡಲಾಗುವುದು ಎಂದು ಪಳನಿಸ್ವಾಮಿ, ಈ ಸಂದರ್ಭದಲ್ಲಿ ಸುದ್ದಿಗಾರಿಗೆ ತಿಳಿಸಿದರು.