ಮಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಸಿಎಂಗೆ ಮನವಿ
ಮಂಗಳೂರು, ಫೆ.20: ಕೇಂದ್ರ ಹಾಗೂ ರಾಜ್ಯ ಸರಕಾರದ ಬಜೆಟ್‌ನಲ್ಲಿ ಯೋಜನಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ.25ರಷ್ಟು ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿಯನ್ನು ರೂಪಿಸಲು ಡಾ.ಬರಗೂರು ರಾಮಚಂದ್ರಪ್ಪ ನೌತೃತ್ವದಲ್ಲಿ ಶಿಕ್ಷಣ ಸಮಿತಿ ರಚಿಸಬೇಕು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹುಜನರ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರಕಾರದ ಮೀಸಲಾತಿ ನೀತಿಯ ನಿಗದಿತ ಶೇಖಡಾವಾರು ಪ್ರಮಾಣವನ್ನು (ತಮಿಳುನಾಡು ಸರಕಾರದಂತೆ) ಶೇ.25ಕ್ಕೆ ನಿಗದಿಗೊಳಿಸಲು ಕಾನೂನು ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಉಪಯೋಜನೆ 2014ರ ಕಲಂ7ರಡಿ ತಿದ್ದುಪಡಿ ಮಾಡಿ ನಿಯಮ ರೂಪಿಸಿ ಸಮರ್ಥ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಶಿಫಾರಸಿನಂತೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ನೀಡಲಾಗಿರುವ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು.
ಸರಕಾರಿ, ಗೋಮಾಳ ಭೂಮಿಯನ್ನು ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವಾಗ ಭೂ ಸುಧಾರಣಾ ಕಾಯ್ದೆ ಮತ್ತು ಭೂ ಮಂಜೂರಾತಿ ನಿಯಮಗಳ 1969ರ ಕಲಂ 5 ಎ ರಂತೆ ಮೀಸಲಾತಿ ನೀತಿಯನ್ನು ಅನುಸರಿಸಿಯೇ ಸಕ್ರಮಗೊಳಿಸಬೇಕು. ಎಲ್ಲಾ ಜಾತಿಯ ವಸತಿ ಮತ್ತು ಭೂ ರಹಿತ ಬಡವರಿಗೆ ನಿವೇಶನ ಮತ್ತು ವಸತಿ ಸಹಿತ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ.ಎ.ಕೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿ ಮಾಡಬೇಕು. ಸರಕಾರಿ ಸೇವೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆ ಹುದ್ದೆಗಳಲ್ಲಿ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಹೊರ ಗುತ್ತಿಗೆ ನೌಕರರನ್ನು ರೋಷ್ಟರ್ ಪದ್ಧತಿಯನ್ನು ಅನುಸರಿಸಿ ನೇಮಕ ಮಾಡಬೇಕು.
ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೀಸಲು ಹುದ್ದೆಗಳನ್ನು ಭರ್ತಿ ಮಾಡಬೇಕೆಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮುಖ್ಯಮಂತ್ರಿಯವರಿಗೆ ಕಳುಹಿಸಿದ ಮನವಿ ಆಗ್ರಹಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್ ಹಾಗೂ ದ.ಕ. ಜಿಲ್ಲಾ ಸಂಚಾಲಕ ರಘು ಕೆ.ಎಕ್ಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







