ದುಬಾರಿ ವಾಚು, ವಿಲಾಸಿ ಪೆನ್ ನಿಂದ ಪೇಚಿಗೆ ಸಿಲುಕಿದ ಸಿಪಿಎಂ ಸಂಸದ !
ಕೊಲ್ಕತ್ತಾ: ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಸಂಸದರೊಬ್ಬರು ಮೌಂಟ್ ಬ್ಲಾಂಕ್ ಪೆನ್ ಹಾಗೂ ಆಪಲ್ ವಾಚ್ ಹೊಂದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೇಚಿಗೆ ಸಿಲುಕಿದ್ದಾರೆ.
ಸಿಪಿಐ (ಎಂ) ಸಂಸದ ರಿತಬ್ರತ ಬ್ಯಾನರ್ಜಿ ಅವರು ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳ ನಡುವಿನ ಫುಟ್‌ಬಾಲ್ ಪಂದ್ಯವನ್ನು ಫೆಬ್ರವರಿ 12ರಂದು ವೀಕ್ಷಿಸುತ್ತಿದ್ದ ವೇಳೆ, ಈ ದುಬಾರಿ ಪೆನ್ ಮತ್ತು ವಾಚ್ ಹೊಂದಿರುವ ಛಾಯಾಚಿತ್ರವನ್ನು ಸೆರೆಹಿಡಿಯಲಾಗಿತ್ತು. ಈ ಛಾಯಾಚಿತ್ರ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ, ಸಿಪಿಎಂ ಸಂಸದರೊಬ್ಬರು ಇಷ್ಟು ದುಬಾರಿ ವಸ್ತುಗಳನ್ನು ಹೊಂದಿರಲು ಹೇಗೆ ಸಾಧ್ಯ ಎಂಬ ಚರ್ಚೆಗಳು ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದವು.
ಈ ಬಗ್ಗೆ ಚರ್ಚೆ ವ್ಯಾಪಕವಾಗುತ್ತಿದ್ದಂತೆ, ಆ ಪೋಸ್ಟ್ ಮಾಡಿದ ವ್ಯಕ್ತಿಯ ಜಾಡುಹಿಡಿದು, ಆತನ ಉದ್ಯೋಗದಾತರಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದರಿಂದ ವಿವಾದ ಸಂಕೀರ್ಣವಾಯಿತು. "ನಿಮ್ಮ ಕಂಪನಿಯ ಉದ್ಯೋಗಿಯೊಬ್ಬ ನನ್ನ ವಿರುದ್ಧ ದ್ವೇಷಸಾಧಿಸುವ ಬರಹಗಳನ್ನು ಪ್ರಚುರಪಡಿಸುತ್ತಿದ್ದಾರೆ" ಎಂದು ಹೇಳಿದ್ದಲ್ಲದೇ, ಆತನ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಂಸದರ ಈ ನಡೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಟೀಕೆಗೆ ಗುರಿಯಾಯಿತು. ತಮ್ಮ ಬಗ್ಗೆ ಕಾರ್ಟೂನ್ ರಚಿಸಿದ ಪ್ರೊಫೆಸರ್ ಹಾಗೂ ಕಲಾವಿದರೊಬ್ಬರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಕಳುಹಿಸಿದ ಘಟನೆಗೆ ಇದನ್ನು ಹೋಲಿಸಲಾಯಿತು. ಈ ಬಗ್ಗೆ ಪಕ್ಷ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಪಕ್ಷದ ಸಂಸದ ಹಾಗೂ ಪಾಲಿಟ್‌ಬ್ಯೂರೊ ಸದಸ್ಯ ಎಂ.ಡಿ.ಸಲೀಂ ಅವರು, "ಸಾಮಾಜಿಕ ಜಾಲತಾಣವು ಸಾರ್ವಜನಿಕ ವೇದಿಕೆಯಾಗಿದ್ದು, ಯಾರು ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಬಹುದು. ಆದರೆ ಯಾರಿಗೂ ಬೆದರಿಕೆ ಹಾಕುವುದು ಸ್ವೀಕಾರಾರ್ಹವಲ್ಲ. ಅದೂ ಎಡಪಕ್ಷದ ಸಂಸದರೊಬ್ಬರಿಂದ ಯಾರೂ ಇದನ್ನು ನಿರೀಕ್ಷಿಸುವುದಿಲ್ಲ" ಎಂದು ಹೇಳಿದ್ದಾರೆ.