ಗುಲ್ಬರ್ಗಾ: ಪಿಎಫ್‌ಐ ಜಿಲ್ಲಾಧ್ಯಕ್ಷ, ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ
ಗುಲ್ಬರ್ಗಾ, ಫೆ.20: ಗುಲ್ಬರ್ಗಾದಲ್ಲಿ ಫೆಬ್ರವರಿ 17ರಂದು ನಡೆಯಲಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 10ನೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ ಸಂಘಟನೆಯ ಜಿಲ್ಲಾಧ್ಯಕ್ಷ ಮೊಹ್ಸಿನ್ ಹಾಗೂ ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆದೊಯ್ದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿರುವ ಎಸ್‌ಡಿಪಿಐ, ಈ ಘಟನೆ ಅತ್ಯಂತ ಅಮಾನವೀಯ ಎಂದು ತೀವ್ರವಾಗಿ ಖಂಡಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒಂದು ಸಾಮಾಜಿಕ ಸಂಘಟನೆಯಾಗಿದ್ದು, ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದ ವರ್ಗಗಳ ಮೇಲೆ ನಡೆಯುವ ದೌರ್ಜನ್ಯವನ್ನು ನೇರವಾಗಿ ಖಂಡಿಸಿ ಶೋಷಿತ ಸಮುದಾಯಗಳಿಗೆ ನ್ಯಾಯವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟಗಳನ್ನು ಹಮ್ಮಿಕೊಂಡು ಬಂದಿದೆ. ಹೀಗೆ ಸಮಾಜದ ಪರವಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿಯ ದೌರ್ಜನ್ಯವನ್ನು ಪೊಲೀಸರು ಎಸಗಿರುವುದು ಈ ರಾಜ್ಯದ ದುರಂತ ಎಂದು ಹೇಳಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುಲ್ಬರ್ಗಾದಲ್ಲಿ ಕೆಲವು ಕೋಮುವಾದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ರೌಡಿಗಳಂತೆ ವರ್ತಿಸಿರುವುದನ್ನು ಖಂಡಿಸುತ್ತೇವೆ. ಈ ಸಂಬಂಧ ರಾಜ್ಯ ಸರಕಾರ ಒಂದು ಸಮಿತಿಯನ್ನು ರಚಿಸಿ ತನಿಖೆ ಮಾಡಿ ದೌರ್ಜನ್ಯಕ್ಕೆ ಕಾರಣರಾಗಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ತಕ್ಷಣ ಅಮಾನತುಪಡಿಸಿ, ಬಂಧಿಸಬೇಕು. ಆರೋಪಿ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಬೇಕೆಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅಬ್ದುಲ್‌ರಹೀಂ ಪಟೇಲ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







