ಪಾಸ್‌ಪೋರ್ಟ್, ಮುಕೀಮ್ ಕಾರ್ಡ್ ಕಳೆದುಹೋದರೆ 24 ಗಂಟೆಗಳಲ್ಲಿ ಮಾಹಿತಿ ನೀಡಿ : ಸೌದಿ ಸೂಚನೆ

ರಿಯಾದ್, ಫೆ. 20: ಪಾಸ್‌ಪೋರ್ಟ್‌ಗಳು ಮತ್ತು ಮುಕೀಮ್ ಕಾರ್ಡ್‌ಗಳು (ಸೌದಿಯೇತರರ) ಕಳೆದುಹೋದರೆ 24 ಗಂಟೆಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು, ಇಲ್ಲದಿದ್ದರೆ 1,000 ಸೌದಿ ರಿಯಾಲ್ (ಸುಮಾರು 17,843 ರೂಪಾಯಿ) ನಿಂದ 3,000 ಸೌದಿ ರಿಯಾಲ್ (ಸುಮಾರು 53,530 ರೂಪಾಯಿ)ವರೆಗೆ ದಂಡ ಪಾವತಿಸಬೇಕು ಎಂದು ಸೌದಿ ಅರೇಬಿಯದ ಪಾಸ್‌ಪೋರ್ಟ್ ಇಲಾಖೆ ತನ್ನ ನಿವಾಸಿಗಳಿಗೆ ಸೂಚಿಸಿದೆ ಎಂದು ‘ಅಲ್-ಮದೀನಾ’ ಪತ್ರಿಕೆ ವರದಿ ಮಾಡಿದೆ.
ಮುಕೀಮ್ (ನಿವಾಸಿ) ಕಾರ್ಡ್‌ಗಳ ವಾಯಿದೆ ಕೊನೆಗೊಳ್ಳುವ ಮುನ್ನ ಅವುಗಳನ್ನು ನವೀಕರಿಸುವಂತೆ ಇಲಾಖೆಯು ಸೌದಿಯೇತರರಿಗೆ ಸೂಚಿಸಿದೆ. ಶುಲ್ಕಗಳನ್ನು ಬ್ಯಾಂಕ್‌ಗಳ ಮೂಲಕ ಪಾವತಿಸಿ ಆಂತರಿಕ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನವೀಕರಿಸಬಹುದು ಎಂದಿದೆ.
ಅವಧಿ ಮುಗಿದ ಮುಕೀಮ್ ಕಾರ್ಡ್‌ಗಳನ್ನು ಹೊಂದಿದವರಿಗೆ ಇಲಾಖೆಯ ಸೇವೆಗಳ ಪ್ರಯೋಜನ ಲಭಿಸುವುದಿಲ್ಲ ಹಾಗೂ ಅವರು ಮೊದಲ ಬಾರಿಗೆ 500 ಸೌದಿ ರಿಯಾಲ್ (8921 ರೂಪಾಯಿ) ಹಾಗೂ ಪುನರಾವರ್ತನೆಯಾದರೆ ಹೆಚ್ಚಿನ ದಂಡವನ್ನು ಕಟ್ಟಬೇಕು ಎಂದು ಅದು ಹೇಳಿದೆ.
ಸೌದಿಯೇತರರಿಗೆ ವಾಸ್ತವ್ಯ ಪರವಾನಿಗೆಗೆ ಪರ್ಯಾಯವಾಗಿ ಮುಕೀಮ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಎರಡು ವರ್ಷಗಳ ಹಿಂದೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಐದು ವರ್ಷಗಳ ವಾಯಿದೆ ಹೊಂದಿರುತ್ತದೆ. ಅದನ್ನು ಆನ್‌ಲೈನ್ ಮೂಲಕ ನವೀಕರಿಸಲಾಗುತ್ತದೆ ಹಾಗೂ ಅಂಚೆ ಮೂಲಕ ವಿತರಿಸಲಾಗುತ್ತದೆ.
ಪ್ರಯಾಣ ಮಾಡುವಾಗ ಮುಕೀಮ್ ಕಾರ್ಡ್‌ಗಳನ್ನು ಜೊತೆಗಿಟ್ಟುಕೊಳ್ಳುವಂತೆ ಇಲಾಖೆಯು ಕಾರ್ಡುದಾರರಿಗೆ ಸೂಚಿಸಿದೆ.







