ಮಂಗಳೂರು: ವೇಶ್ಯಾವಾಟಿಕೆಯಲ್ಲಿ ತೊಡಗಿದ ಇಬ್ಬರ ಬಂಧನ
ಮಂಗಳೂರು, ಫೆ.20: ನಗರದ ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ವೊಂದಕ್ಕೆ ರವಿವಾರ ಸಂಜೆ ದಾಳಿ ನಡೆಸಿರುವ ಕದ್ರಿ ಠಾಣಾ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 5 ಮೊಬೈಲ್ ಹಾಗೂ 10,850 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬೋಳೂರಿನ ತರುಣ್ (32) ಹಾಗೂ ಲಾಡ್ಜ್ ಸಿಬ್ಬಂದಿ ವೇಣೂರಿನ ಮಹಮ್ಮದ್ ಅಲಿ (29) ಬಂಧಿತ ಆರೋಪಿಗಳು.
ಈ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಮೇರೆಗೆ ಎಸಿಪಿ ಉದಯನಾಯಕ್ ಅವರ ಮಾರ್ಗದರ್ಶನದಲ್ಲಿ ಕದ್ರಿ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ.
ದಾಳಿಯ ಸಂದರ್ಭದಲ್ಲಿ ಇಬ್ಬರು ಮಹಿಳೆಯನ್ನು ರಕ್ಷಿಸಲಾಗಿದ್ದು, ಲಾಡ್ಜ್‌ನ ಮಾಲಕರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಕ್ಷಿಸಲ್ಪಟ್ಟ ಮಹಿಳೆಯರನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.
Next Story





