ಉ.ಪ್ರ: ಬಡವರಿಗೆ ಪಿಂಚಣಿ ಯೋಜನೆ ಪ್ರಶ್ನಿಸಿದ್ದ ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ತಿರಸ್ಕೃತ
ಹೊಸದಿಲ್ಲಿ,ಫೆ.20: ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರಕಾರವು ಬಡವರಿಗಾಗಿ ರೂಪಿಸಿರುವ ‘ಸಮಾಜವಾದಿ’ ಪಿಂಚಣಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಇದೊಂದು ಬಡವರಿಗಾಗಿ ರೂಪಿಸಲಾಗಿರುವ ‘ಸುಂದರ’ ಯೋಜನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಸ್.ಕೆ.ಕೌಲ್ ಅವರನ್ನೊಳಗೊಂಡ ಪೀಠವು ಹೇಳಿತು.
ಯೋಜನೆಯನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ತಳ್ಳಿ ಹಾಕಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ಸಂಘಟನೆಯು ಮೇಲ್ಮನವಿ ಸಲ್ಲಿಸಿತ್ತು.
ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.26 ಮೀಸಲಾತಿಯನ್ನು ಒದಗಿಸಲಾಗಿದ್ದು ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅದು ತನ್ನ ಅರ್ಜಿಯಲ್ಲಿ ದೂರಿಕೊಂಡಿತ್ತು.
Next Story





