ಬಿಎಸ್ಪಿ ಅಂದರೆ ‘ಬಹೆನ್‌ಜಿ ಸಂಪತ್ತಿ ಪಾರ್ಟಿ’
ಜಲೌನ್(ಉ.ಪ್ರ.),ಫೆ.20: ನೋಟು ನಿಷೇಧಕ್ಕೆ ಬಿಎಸ್ಪಿ ಅಧಿನಾಯಕಿ ಮಾಯಾವತಿಯವರ ವಿರೋಧವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ‘‘ಬಿಎಸ್ಪಿಯು ಈಗ ಬಹುಜನ ಸಮಾಜವಾದಿ ಪಕ್ಷವಾಗಿ ಉಳಿದಿಲ್ಲ. ಈಗ ಅದು ‘ಬಹೆನ್‌ಜಿ ಸಂಪತ್ತಿ ಪಾರ್ಟಿ’ ಆಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬುಂದೇಲ್‌ಖಂಡ ಪ್ರಾಂತದ ಜಲೌನ್‌ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ತಮಗಾಗಿ ಸಂಪತ್ತನ್ನು ಕೂಡಿಹಾಕುವವರು, ಯಾವತ್ತೂ ಜನರ ಸಮಸ್ಯೆಗಳನ್ನು ಬಗೆಹರಿಸಲಾರರು ಎಂದಿದ್ದಾರೆ.
ನಗದು ಅಮಾನ್ಯದ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ಪ್ರಧಾನಿ ತನ್ನ ಭಾಷಣದಲ್ಲಿ ಕಿಡಿಕಾರಿದರು.
‘‘ಕಳೆದ ವರ್ಷದ ನವೆಂಬರ್ 8ರಂದು ನಾನು ನೋಟು ನಿಷೇಧವನ್ನು ಘೋಷಿಸಿದಾಗ ಪರಸ್ಪರ ಕಣ್ಣೆತ್ತಿಯೂ ನೋಡದ ಬದ್ಧಪ್ರತಿಸ್ಪರ್ಧಿಗಳಾದ ಎಸ್ಪಿ ಹಾಗೂ ಬಿಎಸ್ಪಿ ಈಗ ಜೊತೆಯಾಗಿವೆ. ನಾನು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದಾಗ ಹಾಗೂ ಕಪ್ಪುಹಣದ ಕುರಿತು ವಿವರಗಳನ್ನು ಕೇಳಿದಾಗಲೂ ಅವು ಜೊತೆಗೂಡಿದವು. ಕಾಂಗ್ರೆಸ್ ಸೇರಿದಂತೆ ಎಲ್ಲರೂ ಒಂದೇ ಭಾಷೆಯಲ್ಲಿ ಮಾತನಾಡತೊಡಗಿದರು’’ ಎಂದರು.
ಉತ್ತರಪ್ರದೇಶದಲ್ಲಿ ಈ ಪಕ್ಷಗಳಿಗೆ ನೋಟು ನಿಷೇಧವು ಮುಖ್ಯ ಕಾಳಜಿಯ ವಿಷಯವಾಗಿರಲಿಲ್ಲ. ಆದರೆ ತಮ್ಮ ಅಕ್ರಮ ಹಣವನ್ನು ಬಿಳುಪುಗೊಳಿಸಲು ಸಮರ್ಪಕವಾದ ಸಮಯ ದೊರೆಯದಿರುವುದು ಅವುಗಳಿಗೆ ಚಿಂತೆಯುಂಟು ಮಾಡಿದೆ ಎಂದವರು ಹೇಳಿದರು.
‘‘ನೋಟು ನಿಷೇಧ ಜಾರಿಗೊಳಿಸುವಾಗ ಸರಕಾರವು ಸೂಕ್ತವಾದ ಪೂರ್ವಸಿದ್ಧತೆ ಮಾಡಿಕೊಂಡಿಲ್ಲವೆಂದು ಬೆಹೆನ್‌ಜಿ ಆರೋಪಿಸುತ್ತಿದ್ದಾರೆ. ಅದನ್ನು ಜಾರಿಗೊಳಿಸುವ ಮೊದಲು ಒಂದು ವಾರದ ಕಾಲಾವಕಾಶ ನೀಡಬೇಕಿತ್ತೆಂದು ಅವರು ಹೇಳಿದ್ದರು. ಮುಲಾಯಂ ಕೂಡಾ ಹಾಗೆಯೇ ಹೇಳಿದ್ದರು’’ ಎಂದು ಪ್ರಧಾನಿ ಕುಹಕವಾಡಿದರು.