ಐಪಿಎಲ್ ಹರಾಜು: ಸ್ಟೋಕ್ಸ್‌ಗೆ 14.50 ಕೋಟಿ ರೂ. ಜಾಕ್‌ಪಾಟ್
ಪುಣೆ ತೆಕ್ಕೆಗೆ ಸೇರಿದ ಇಂಗ್ಲೆಂಡ್‌ನ ಆಲ್‌ರೌಂಡರ್

ಬೆಂಗಳೂರು, ಫೆ.20: ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇಲ್ಲಿ ಸೋಮವಾರ ನಡೆದ 10ನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜಿನಲ್ಲಿ ಗರಿಷ್ಠ 14.50 ಕೋಟಿ ರೂ.ಗಳಿಗೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ತೆಕ್ಕೆಗೆ ಸೇರ್ಪಡೆಗೊಳ್ಳುವುದರೊಂದಿಗೆ ಜಾಕ್‌ಪಾಟ್ ಗಿಟ್ಟಿಸಿಕೊಂಡಿದ್ದಾರೆ.
ಬೆಂಗಳೂರಿನ ಹೊಟೇಲೊಂದರಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸ್ಟೋಕ್ಸ್ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ ಗರಿಷ್ಠ ಮೊತ್ತಕ್ಕೆ ಹರಾಜು ಆಗಿ ಅಚ್ಚರಿ ಮೂಡಿಸಿದರು. ಇದೇ ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಸ್ಟೋಕ್ಸ್ ಮೂಲಬೆಲೆ 2 ಕೋಟಿ ರೂ. ಆಗಿತ್ತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಖರೀದಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಪೈಪೋಟಿಗಿಳಿದವು.. ಆದರೆ ಅವರ ವೌಲ್ಯ 10.50 ಕೋಟಿ ರೂ.ಗಳಿಗೆ ಮುಟ್ಟುತ್ತಿದ್ದಂತೆ ಈ ಎರಡೂ ತಂಡಗಳು ದೂರ ಸರಿದವು.
ಮುಂಬೈ ತಂಡ ಸ್ಟೋಕ್ಸ್‌ರನ್ನು ಖರೀದಿಸುವ ಪ್ರಯತ್ನ ಕೈಬಿಟ್ಟಾಗ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ರಂಗ ಪ್ರವೇಶಿಸಿತು. ಪಟ್ಟು ಬಿಡದ ಪುಣೆ ಕೊನೆಗೂ ಭಾರೀ ಮೊತ್ತಕ್ಕೆ ಸ್ಟೋಕ್ಸ್‌ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಮೂಲತಃ ನ್ಯೂಝಿಲೆಂಡ್‌ನ ಆಟಗಾರ ಸ್ಟೋಕ್ಸ್ ಇಂಗ್ಲೆಂಡ್‌ನ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಸ್ಫೋಟಕ ಆಲ್‌ರೌಂಡರ್. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸ್ಟೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದರು.
ಇಂಗ್ಲೆಂಡ್ ಪರ 32 ಟೆಸ್ಟ್ ಗಳನ್ನು ಆಡಿರುವ ಸ್ಟೋಕ್ಸ್ 50 ಏಕದಿನ ಮತ್ತು 21 ಟ್ವೆಂಟಿ-20ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
12 ಕೋಟಿ ರೂ.ಗೆ ಮಿಲ್ಸ್ ಆರ್‌ಸಿಬಿಗೆ :
ಇಂಗ್ಲೆಂಡ್‌ನ ಇನ್ನೊಬ್ಬ ಆಟಗಾರ ಎಡಗೈ ವೇಗದ ಬೌಲರ್ ಟೈಮಲ್ ಮಿಲ್ಸ್ ಅವರು 12 ಕೋಟಿ ರೂ.ಗೆೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರ್ಪಡೆಗೊಂಡರು. ಮೂಲಬೆಲೆ 50 ಲಕ್ಷ ರೂ. ಹೊಂದಿದ್ದ ಮಿಲ್ಸ್ ಅವರ ಖರೀದಿಗೆ ಆರ್‌ಸಿಬಿ ಮತ್ತು ಕೆಕೆಆರ್ ಆಸಕ್ತಿ ವಹಿಸಿದವು. ಆದರೆ ಅಂತಿಮವಾಗಿ ಆರ್‌ಸಿಬಿ ಭಾರೀ ಮೊತ್ತಕ್ಕೆ ಖರೀದಿಸಿದೆ. ಮಿಲ್ಸ್ ಇಂಗ್ಲೆಂಡ್ ಪರ ಕೇವಲ 3 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. 2016ರಲ್ಲಿ ಅವರು ಶ್ರೀಲಂಕಾ ವಿರುದ್ಧ ಆಡುವ ಮೂಲಕ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಕಳೆದ ಫೆ.1ರಂದು ಭಾರತದ ವಿರುದ್ಧ ಟ್ವೆಂಟಿ-20 ಪಂದ್ಯ ಆಡಿರುವುದು ಕೊನೆಯ ಪಂದ್ಯವಾಗಿತ್ತು.
24ರ ಹರೆಯದ ಯಾರ್ಕ್‌ಶೈರ್ ಅಟಗಾರ ಮಿಲ್ಸ್ ಬಿಗ್ ಬ್ಯಾಶ್‌ನ ಹಲವು ತಂಡಗಳಲ್ಲಿ ಆಡಿದ್ದರು. ಬಾಂಗ್ಲಾದೇಶ ಪ್ರಿಮೀಯರ್ ಲೀಗ್ ಮತ್ತು ಪಾಕಿಸ್ತಾನ ಪ್ರಿಮಿಯರ್ ಲೀಗ್‌ನಲ್ಲಿ ಆಡಿದ್ದ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿದ್ದಾರೆ.
ನ್ಯೂಝಿಲೆಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ದಕ್ಷಿಣ ಆಫ್ರಿಕದ ಕಗಿಸೊ ರಬಾಡ ತಲಾ 5 ಕೋಟಿ ರೂ.ಗಳಿಗೆ ಕ್ರಮವಾಗಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್‌ಗ್ಸೆ ಸೇರ್ಪಡೆಗೊಂಡರು.
ಆಸ್ಟ್ರೇಲಿಯದ ಪ್ಯಾಟ್ ಕುಮಿನ್ಸ್ (4.5 ಕೋಟಿ ರೂ.) ಡೆಲ್ಲಿ , ಇಗ್ಲೆಂಡ್‌ನ ಕ್ರಿಸ್ ವೋಕ್ಸ್ (4.2 ಕೋಟಿ ರೂ.) ಅವರು ಕೋಲ್ಕತಾ ನೈಟ್‌ರೈಡರ್ಸ್ ಸೇರಿದರು.
ಇದೇ ಮೊದಲ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡ ಯುದ್ಧಪೀಡಿತ ಅಫ್ಘಾನಿಸ್ತಾನದ ಆಟಗಾರರ ಪೈಕಿ ರಶೀದ್ ಖಾನ್ ಅರ್ಮಾನ್ 4 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರ್ಪಡೆಗೊಂಡರು. ಅವರ ತಂಡದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮುಹಮ್ಮದ್ ನಬಿ ಅವರು ಕೂಡಾ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದರು.
ಆಸ್ಟ್ರೇಲಿಯದ ನಥನ್ ಕೌಲ್ಟರ್ ನೀಲ್ (3.5 ಕೋಟಿ ರೂ.ಗೆ )ಕೋಲ್ಕತಾ ನೈಟ್ ರೈಡರ್ಸ್ ಸೇರ್ಪಡೆಗೊಂಡರು.
ಭಾರತದ ದೇಶೀಯ ಆಟಗಾರರ ಪೈಕಿ ಅಷ್ಟೇನೂ ಪ್ರಸಿದ್ಧಿ ಪಡೆಯದ ತಮಿಳುನಾಡಿನ ಟಿ.ನಟರಾಜನ್ 3 ಕೋಟಿ ರೂ.ಗೆ ೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತೆಕ್ಕೆಗೆ ಸೇರಿದರು.
ಭಾರತದ ಕರಣ್ ಶರ್ಮ 3.2 ಕೋಟಿ ರೂ.ಗೆ ಮುಂಬೈ ತಂಡದಲ್ಲಿ ಅವಕಾಶ ಪಡೆಯುವುದರೊಂದಿಗೆ ಗರಿಷ್ಠ ಮೊತ್ತಕ್ಕೆ ಭಾರತದ ಆಟಗಾರ ಎನಿಸಿಕೊಂಡರು. ರಾಜಸ್ಥಾನದ ಎಡಗೈ ವೇಗಿ ಅಂಕಿತ್ ಚೌಧರಿ 2 ಕೋಟಿ ರೂ.ಗಳಿಗೆ ಆರ್‌ಸಿಬಿಗೆ ,ಕರ್ನಾಟಕದ ಯುವ ಲೆಗ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ 2 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾದರು. ಭಾರತ ಕ್ರಿಕೆಟ್ ತಂಡದಿಂದ ಕಡೆಗಣಿಸಲ್ಪಟ್ಟ ವರುಣ್ ಆ್ಯರೊನ್ 2.8 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಅವಕಾಶ ಪಡೆದರು.
ಎಡಗೈ ವೇಗಿ ಪವನ್ ನೇಗಿ 1 ಕೋಟಿ ರೂ.ಗೆ ಆರ್‌ಸಿಬಿ ಸೇರಿದರು. ಕಳೆದ ವರ್ಷ ಅವರು ರೂ. 8.5 ಕೋಟಿಗೆ ಡೆಲ್ಲಿ ಡೇರ್‌ಡೆವಿಲ್ಸ್ ಸೇರಿದ್ದರು. ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಅಗ್ರ ಸರದಿಯ ಆಟಗಾರ ಚೇತೇಶ್ವರ ಪೂಜಾರ ಮತ್ತು ವೇಗದ ಬೌಲರ್ ಇಶಾಂತ್ ಶರ್ಮ ಮಾರಾಟವಾಗದೆ ಉಳಿದರು.
,,,,,,,,,,,
ಹೈಲೈಟ್ಸ್
*ಒಟ್ಟು 352 ಆಟಗಾರರು ಹರಾಜು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಈ ಪೈಕಿ 66 ಮಂದಿ ಹರಜಾಗಿ ವಿವಿಧ ತಂಡಗಳಿಗೆ ಸೇರ್ಪಡೆಗೊಂಡರು. * ಹರಾಜಾಗಿರುವ ಭಾರತದ ಆಟಗಾರರು 39 *ಹರಾಜು ಆಗಿರುವ ವಿದೇಶಿ ಆಟಗಾರರು 27
*ಗುಜರಾತ್ ಲಯನ್ಸ್ ತಂಡ ಗರಿಷ್ಠ 11 ಆಟಗಾರರನ್ನು ಖರೀದಿಸಿತು.
*ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನಿಷ್ಠ 5 ಆಟಗಾರರನ್ನು ಖರೀದಿಸಿತು.
*ಪುಣೆ ಸೂಪರ್ ಜೈಂಟ್ಸ್ ಫ್ರಾಂಚೈಸಿ ತಂಡ ಆಟಗಾರರ ಖರೀದಿಗೆ ಗರಿಷ್ಠ ಹಣ( 17.20 ಕೋಟಿ ರೂ.)ವಿನಿಯೋಗಿಸಿತು.
*ಗುಜರಾತ್ ತಂಡ ಆಟಗಾರರ ಖರೀದಿಗೆ ಕಡಿಮೆ ಹಣ (3.85 ಕೋಟಿ ರೂ.) ವಿನಿಯೋಗಿಸಿದೆ.
* ಗರಿಷ್ಠ ಮೊತ್ತಕ್ಕೆ ಹರಾಜಾದ ವಿದೇಶದ ಆಟಗಾರ ಬೆನ್‌ಸ್ಟೋಕ್ಸ್ (ಪುಣೆ): 14 ಕೋಟಿ ರೂ. *ಗರಿಷ್ಠ ಮೊತ್ತಕ್ಕೆ ಹರಾಜಾದ ಭಾರತದ ಆಟಗಾರ ಕರಣ್ ಶರ್ಮ( ಮುಂಬೈ):3.20 ಕೋಟಿ ರೂ.
,,,,
ವಿವಿಧ ತಂಡಗಳು ಖರೀದಿಸಿದ ಆಟಗಾರರ ವಿವರ
*ಡೆಲ್ಲಿ ಡೇರ್‌ಡೆವಿಲ್ಸ್ 14.05 ಕೋಟಿ ರೂ.ಗೆ 9 ಆಟಗಾರರು
*ಗುಜರಾತ್ ಲಯನ್ಸ್ 3.85 ಕೋಟಿ. ರೂ.ಗೆ 11 ಆಟಗಾರರು.
*ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 9.45 ಕೋಟಿ ರೂ.ಗೆ 8 ಆಟಗಾರರು.
* ಕೋಲ್ಕತಾ ನೈಟ್ ರೈಡರ್ಸ್ 14.35 ಕೋಟಿ ರೂ.ಗೆ 9 ಆಟಗಾರರು.
*ಮುಂಬೈ ಇಂಡಿಯನ್ಸ್ 8.20 ಕೋಟಿ ರೂ.ಗೆ 7 ಆಟಗಾರರು
*ರೈಸಿಂಗ್‌ಪುಣೆ ಸೂಪರ್‌ಜೈಂಟ್ಸ್ 17.20 ಕೋಟಿ ರೂ.ಗೆ 9 ಆಟಗಾರರು
*ರಾಯಲ್ ಚಾಲೆಂಜರ್ಸ್ ಬೆಂಗಳೂರು 15.40 ಕೋಟಿ ರೂ.ಗೆ 5 ಆಟಗಾರರು.
*ಸನ್‌ರೈಸರ್ಸ್ ಹೈದರಾಬಾದ್ 8.65 ಕೋಟಿ ರೂ.ಗೆ 8 ಆಟಗಾರರು.
10ನೆ ಐಪಿಎಲ್‌ಗೆ ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್-10 ಆಟಗಾರರು
ಬೆನ್ ಸ್ಟೋಕ್ಸ್(ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್): 14.50 ಕೋ.ರೂ.
ಟೈಮಲ್ ಮಿಲ್ಸ್(ರಾಯಲ್ ಚಾಲೆಂಜರ್ಸ್ ಬೆಂಗಳೂರು): 12 ಕೋ.ರೂ.
ಟ್ರೆಂಟ್ ಬೌಲ್ಟ್(ಕೋಲ್ಕತಾ ನೈಟ್ ರೈಡರ್ಸ್): 5 ಕೋ.ರೂ.
ಕಾಗಿಸೊ ರಬಾಡ(ಡೆಲ್ಲಿ ಡೇರ್ ಡೆವಿಲ್ಸ್): 5 ಕೋ.ರೂ.
ಪ್ಯಾಟ್ ಕುಮ್ಮಿನ್ಸ್(ಡೆಲ್ಲಿ ಡೇರ್ ಡೆವಿಲ್ಸ್): 4.5 ಕೋ.ರೂ.
ಕ್ರಿಸ್ ವೋಕ್ಸ್(ಕೋಲ್ಕತಾ ನೈಟ್ ರೈಡರ್ಸ್): 4.2 ಕೋ.ರೂ.
ರಶೀದ್ ಖಾನ್ ಅರ್ಮಾನ್(ಸನ್‌ರೈಸರ್ಸ್ ಹೈದರಾಬಾದ್): 4 ಕೋ.ರೂ.
ನಥನ್ ಕೌಲ್ಟರ್-ನೀಲ್(ಕೋಲ್ಕತಾ ನೈಟ್ ರೈಡರ್ಸ್): 3.5 ಕೋ.ರೂ.
ಕರ್ಣ್ ಶರ್ಮ(ಮುಂಬೈ ಇಂಡಿಯನ್ಸ್): 3.2 ಕೋ.ರೂ.
ಟಿ.ನಟರಾಜನ್(ಕಿಂಗ್ಸ್ ಇಲೆವೆನ್ ಪಂಜಾಬ್): 3 ಕೋ.ರೂ.
ಹರಾಜಾಗದೇ ಉಳಿದ ಪ್ರಮುಖ ಆಟಗಾರರು
ಇಶಾಂತ್ ಶರ್ಮ
ಇರ್ಫಾನ್ ಪಠಾಣ್
ಚೇತೇಶ್ವರ ಪೂಜಾರ
ಅಭಿನವ್ ಮುಕುಂದ್
ಪ್ರಗ್ಯಾನ್ ಓಜಾ
ಉನ್ಮುಕ್ತ್ ಚಂದ್
ಪರ್ವೇಝ್ ರಸೂಲ್
ವಿರಾಟ್ ಸಿಂಗ್
ಪೃಥ್ವಿ ಶಾ
ಫೈಝ್ ಫಝಲ್
ರಾಸ್ ಟೇಲರ್
ಇಮ್ರಾನ್ ತಾಹಿರ್
ಐಶ್ ಸೋಧಿ
ಮರ್ಲಾನ್ ಸ್ಯಾಮುಯೆಲ್ಸ್
ತಿಸಾರ ಪೆರೇರ
ದಿನೇಶ್ ಚಾಂಡಿಮಲ್







