ಬಡಕುಟುಂಬದ ನಟರಾಜನ್ ಈಗ ಕೋಟ್ಯಧೀಶ

ಬೆಂಗಳೂರು, ಫೆ.20: ತಮಿಳುನಾಡಿನ ಬಡ ಕುಟುಂಬದಿಂದ ಬಂದಿರುವ ಅಷ್ಟೇನೂ ಪ್ರಸಿದ್ಧಿಯಲ್ಲಿಲ್ಲದ 25ರ ಹರೆಯದ ಎಡಗೈ ವೇಗದ ಬೌಲರ್ ತಂಗರಸು ನಟರಾಜನ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಟ್ಯಧಿಪತಿಯಾಗಿ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಕೆಲವೇ ನಿಮಿಷದಲ್ಲಿ ಚೆನ್ನೈನ ಈ ಯುವಕನ ಅದೃಷ್ಟ ಖುಲಾಯಿಸಿದೆ.
ವೈವಿಧ್ಯಮಯ ಬೌಲಿಂಗ್ ಹಾಗೂ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯದಿಂದ ತಮಿಳುನಾಡಿನ ‘ಮುಸ್ತಫಿಝುರ್ರಹ್ಮಾನ್’ ಎಂದೇ ಪ್ರಸಿದ್ಧನಾಗಿರುವ ಎಡಗೈ ವೇಗದ ಬೌಲರ್ ನಟರಾಜನ್ 10 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ವೀರೇಂದ್ರ ಸೆಹ್ವಾಗ್ ಮಾರ್ಗದರ್ಶನದಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಟರಾಜನ್‌ರನ್ನು 3 ಕೋಟಿ ರೂ.ಗೆ ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಕಡುಬಡತನದಲ್ಲಿ ಬೆಳೆದು ಬಂದಿರುವ ನಟರಾಜನ್ ತಾಯಿ ರಸ್ತೆ ಬದಿಯಲ್ಲಿ ಸ್ಟಾಲ್‌ವೊಂದನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರೆ, ತಂದೆ ರೈಲ್ವೆ ಸ್ಟೇಶನ್‌ನಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಐವರು ಮಕ್ಕಳ ಪೈಕಿ ಓರ್ವರಾಗಿರುವ ನಟರಾಜನ್ ಸೇಲಂನಲ್ಲಿ ಟೆನಿಸ್ ಚೆಂಡಿನಲ್ಲಿ ಆಡುವ ಮೂಲಕ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚೆನ್ನೈಗೆ ಪ್ರಯಾಣ ಬೆಳೆಸಿದ ನಟರಾಜನ್ ಅವರು ಆರ್. ಅಶ್ವಿನ್, ಮುರಳಿ ವಿಜಯ್ ಅವರಂತಹ ಆಟಗಾರರನ್ನು ರೂಪಿಸಿರುವ ಜೋಲಿ ರೋವರ್ಸ್ ಕ್ರಿಕೆಟ್ ಕ್ಲಬ್‌ಗೆ ಸೇರಿಕೊಂಡರು.
ಕಳೆದ ವರ್ಷ ನಟರಾಜನ್ ಚೊಚ್ಚಲ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಯಶಸ್ವಿ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಫ್ರಾಂಚೈಸಿಯ ಗಮನ ಸೆಳೆದಿದ್ದಾರೆ.
‘‘ನಾನು 3 ಕೋಟಿ ರೂ.ಗೆ ಹರಾಜಾಗಿದ್ದೇನೆಂದು ನಂಬಲು ಸಾಧ್ಯವಾಗುತ್ತಿಲ್ಲ. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಯ್ಕೆಯಾಗಿರುವುದು ಅನಿರೀಕ್ಷಿತವಾಗಿತ್ತು. ಇದೀಗ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದೇನೆ. ಟಿಎನ್‌ಪಿಎಲ್‌ಗೆ ಆಯ್ಕೆಯಾದಾಗ ನನಗೆ ಸಾಕಷ್ಟು ಒತ್ತಡವಿತ್ತು. ಅಶ್ವಿನ್, ವಿಜಯ್ ಹಾಗೂ ಎಲ್.ಬಾಲಾಜಿಗೆ(ಬೌಲಿಂಗ್ ಕೋಚ್)ಕೃತಜ್ಞತೆ ಸಲ್ಲಿಸಲು ಬಯಸುವೆ. ಅವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದರು. ಅವರ ಉತ್ತೇಜನದಿಂದ ರಣಜಿ ಟ್ರೋಫಿಯಲ್ಲಿ ಆಡುವ ಕನಸು ಈಡೇರಿತು. ಇದೀಗ ಐಪಿಎಲ್‌ನ್ನು ಎದುರು ನೋಡುತ್ತಿರುವೆ’’ ಎಂದು ನಟರಾಜನ್ ನುಡಿದರು.
ಚೆನ್ನೈ ಕ್ರಿಕೆಟ್ ಕ್ಲಬ್‌ನಲ್ಲಿ ಎರಡು ವರ್ಷ ಸ್ಥಿರ ಪ್ರದರ್ಶನ ನೀಡಿದ್ದ ನಟರಾಜನ್ 2015-16ರ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಪಂಜಾಬ್ ತಂಡವನ್ನು ಸೇರ್ಪಡೆಯಾಗಿರುವ ನಟರಾಜನ್ ಸಹ ಆಟಗಾರ ಮುರಳಿ ವಿಜಯ್‌ರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ.







