ತಣ್ಣೀರುಪಂಥ ಗ್ರಾಪಂಗೆ ಎಸಿಬಿ ದಾಳಿ
-BCK.gif)
ಉಪ್ಪಿನಂಗಡಿ, ಫೆ.20: ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ತಣ್ನೀರುಪಂಥ ಗ್ರಾಪಂ ಕಚೇರಿಗೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಅಶ್ರಫ್ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ಸಲ್ಲಿಸಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ನ ಕಲ್ಲೇರಿ ಕ್ವಾಟ್ರರ್ಸ್ ಬಳಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಸರಕಾರಿ ಜಾಗದಲ್ಲಿ ನಿರ್ಮಿಸಲಾದ 5 ಮನೆಗಳಿಗೆ ಡೋರ್ ನಂಬ್ರ ನೀಡಿ ಅಧಿಕಾರ ದುರುಪಯೋಗ ನಡೆಸಲಾಗಿದೆ. ಮಾತ್ರವಲ್ಲದೆ ಗ್ರಾಪಂ ವ್ಯಾಪ್ತಿಯ ಕರಾಯ ಎಂಬಲ್ಲಿ ಖಾಸಗಿ ಸ್ವಾಮ್ಯದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ‘ಪಂಚಾಯತ್ ಸಮುದಾಯ ಭವನ’ವೆಂದು ಗ್ರಾಪಂ ಆಡಳಿತ ಬೋರ್ಡ್ ಅಳವಡಿಸಿದೆ. ಇದರಲ್ಲೂ ಆರ್ಥಿಕ ವಂಚನೆ ನಡೆದಿದೆ ಎಂದು ಆಪಾದಿಸಿದ್ದರು. ಈ ಎರಡು ದೂರುಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಸೈ ಯೋಗೀಶ್ ಕುಮಾರ್ ನೇತೃತ್ವದ ತಂಡ ಇಂದು ಪಂಚಾಯತ್ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತು.
ಸಂಬಂಧಪಟ್ಟ ಎಲ್ಲ ದಾಖಲೆ ಗಳೊಂದಿಗೆ ಇಲಾಖಾ ಕಚೇರಿಗೆ ವಿಚಾರಣೆಗೆ ಬರುವಂತೆ ಗ್ರಾಪಂ ಪಿಡಿಒ ಪೂರ್ಣಿಮಾರಿಗೆ ನಿರ್ದೇಶನವಿತ್ತರು. ಕಾರ್ಯಾಚರಣೆಯಲ್ಲಿ ಇಲಾಖಾ ಸಿಬ್ಬಂದಿ ರಾಧಾಕೃಷ್ಣ ಹಾಗೂ ಹರಿಪ್ರಸಾದ್ ಭಾಗವಹಿಸಿದ್ದರು.





