ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಫ್ರಿದಿ ವಿದಾಯ

ದುಬೈ, ಫೆ.20: ಪಾಕಿಸ್ತಾನದ ಹಿರಿಯ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಟ್ವೆಂಟಿ-20 ಕ್ರಿಕೆಟ್‌ಗೆ ರವಿವಾರ ನಿವೃತ್ತಿ ಘೋಷಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ತೆರೆಮರೆಗೆ ಸರಿದರು.
36ರ ಹರೆಯದ ಆಟಗಾರ ಅಫ್ರಿದಿ 2010ರಲ್ಲಿ ಟೆಸ್ಟ್ ಕ್ರಿಕೆಟ್ ಹಾಗೂ 2015ರ ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ, ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವುದನ್ನು ಮುಂದುವರಿಸಿದ್ದರು.
ಪ್ರಸ್ತುತ ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸಿರುವ ಅಫ್ರಿದಿ ಕರಾಚಿ ಕಿಂಗ್ಸ್ ವಿರುದ್ಧದ ಟ್ವೆಂಟಿ-20 ಪಂದ್ಯದ ವೇಳೆ ಪೇಶಾವರ ತಂಡದ ಪರ 28 ಎಸೆತಗಳಲ್ಲಿ 54 ರನ್ ಗಳಿಸಿದ ಬಳಿಕ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದಾರೆ.
‘‘ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ನಾನು ಅಭಿಮಾನಿಗಳಿಗೋಸ್ಕರ ಕ್ರಿಕೆಟ್ ಆಡುತ್ತಿದ್ದೇನೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇನ್ನು ಎರಡು ವರ್ಷ ಆಡುವೆ. ಇದೀಗ ನನಗೆ ನನ್ನ ಫೌಂಡೇಶನ್ ಅತ್ಯಂತ ಮುಖ್ಯವಾಗಿದೆ. ನನ್ನ ದೇಶದ ಪರ ಗಂಭೀರವಾಗಿ ಹಾಗೂ ವೃತ್ತಿಪರವಾಗಿ ಆಡಿದ್ದೇನೆ’’ ಎಂದು ಅಫ್ರಿದಿ ಶಾರ್ಜಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಫ್ರಿದಿ 2016ರ ಮಾರ್ಚ್‌ನಲ್ಲಿ ಪಾಕ್ ಪರ ಕೊನೆಯ ಪಂದ್ಯ ಆಡಿದ್ದರು. 2016ರ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಗ್ರೂಪ್ ಹಂತದಲ್ಲಿ ಸೋತು ಹೊರ ನಡೆದಿತ್ತು. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ಅಫ್ರಿದಿ 523 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 10,645 ರನ್, 540 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಫ್ರಿದಿ ಅವರು ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್ ಬಳಿಕ 10,000ಕ್ಕೂ ಅಧಿಕ ರನ್ ಹಾಗೂ 500ಕ್ಕೂ ಅಧಿಕ ವಿಕೆಟ್ ಪಡೆದ ವಿಶ್ವದ ಎರಡನೆ ಆಲ್‌ರೌಂಡರ್ ಆಗಿದ್ದಾರೆ.
1996ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಫ್ರಿದಿ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದರು. ಅಫ್ರಿದಿಯ ಈ ವಿಶ್ವದಾಖಲೆಯನ್ನು ಸುಮಾರು 18 ವರ್ಷಗಳ ತನಕ ಯಾರಿಗೂ ಮುರಿಯಲು ಸಾಧ್ಯವಾಗಿರಲಿಲ್ಲ. ಬೌಲಿಂಗ್‌ನಲ್ಲೂ ಎದುರಾಳಿಯ ಬೆವರಿಳಿಸಿದ್ದ ಅಫ್ರಿದಿ 11 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.







