ಅಪರಾಧ ಸಾಬೀತಾದ ಭಯೋತ್ಪಾದಕರಿಗೆ ಜಾಮೀನು, ಪೆರೋಲ್ ಇಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಫೆ.21: ಅಪರಾಧ ಸಾಬೀತಾಗಿರುವ ಭಯೋತ್ಫಾದಕರ ವಿರುದ್ಧ ಕಠಿಣ ನಿಲುವು ಕೈಗೊಂಡಿರುವ ಸುಪ್ರೀಂಕೋರ್ಟ್, ಜನರನ್ನು ವಧಿಸಿ, ಹಲವು ವರ್ಷಗಳಿಂದ ಜೈಲುಗಳಲ್ಲಿ ಬಂಧಿಗಳಾಗಿರುವ ಇವರಿಗೆ ಕೌಟುಂಬಿಕ ಅಗತ್ಯತೆಗಳಿಗಾಗಿ ಪೆರೋಲ್ ಅಥವಾ ಮಧ್ಯಾಂತರ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
"ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವಂಥ ಹೇಯ ಕೃತ್ಯಗಳಲ್ಲಿ ನೀವು ತೊಡಗಿದ್ದರೆ, ನಿಮಗೆ ಕುಟುಂಬ ಹಾಗೂ ಜವಾಬ್ದಾರಿಗಳಿವೆ ಎಂದು ನೀವು ಸಮರ್ಥಿಸಿಕೊಳ್ಳಲಾಗದು. ಅಂಥ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾದ ಕ್ಷಣದಲ್ಲೇ, ನಿಮ್ಮ ಕುಟುಂಬ ಹಾಗೂ ಕುಟುಂಬ ಜೀವನದ ಜತೆಗಿನ ಎಲ್ಲ ಸಂಬಂಧಗಳೂ ಕಳಚಿಕೊಳ್ಳುತ್ತವೆ" ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಸಂಜಯ್ ಕೃಷ್ಣ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ, ಮಹ್ಮದ್ ನೌಶಾದ್ ಎಂಬ ಅಪರಾಧಿ ಮಧ್ಯಾಂತರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿತು. 13 ಮಂದಿಯ ಸಾವು ಹಾಗೂ 38 ಮಂದಿ ಗಾಯಗೊಳ್ಳಲು ಕಾರಣವಾದ 1996ರ ಲಜಪತ್‌ನಗರ ಬಾಂಬ್ ಸ್ಫೋಟದಲ್ಲಿ ವಿಚಾರಣಾ ನ್ಯಾಯಾಲಯ ಹಾಗೂ ದಿಲ್ಲಿ ಹೈಕೋರ್ಟ್ ಮಹ್ಮದ್ ನೌಶಾದ್‌ಗೆ ಶಿಕ್ಷೆ ವಿಧಿಸಿತ್ತು. ವಿಚಾರಣಾ ನ್ಯಾಯಾಲಯ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ, ಆತ ಸಂಚುಕೋರರ ಪೈಕಿ ಒಬ್ಬ ಎಂಬ ಕಾರಣಕ್ಕೆ ದಿಲ್ಲಿ ಹೈಕೋರ್ಟ್ ಇದನ್ನು, ಜೀವಾವಧಿ ಶಿಕ್ಷೆಗೆ ಇಳಿಸಿತ್ತು.
"ನೀವು ಮಗ ಅಥವಾ ಮಗಳು ಇದ್ದಾರೆ ಎಂದು ಹೇಳುವಂತಿಲ್ಲ. ನೀವು ಜಾಮೀನಿಗೆ ಮನವಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಕೆಳಹಂತದ ನ್ಯಾಯಾಲಯ ದಾಖಲಿಸಿದ ಶಿಕ್ಷೆಯನ್ನು ಪ್ರಶ್ನಿಸಿ, ನಿರಪರಾಧಿ ಎಂದು ಪ್ರತಿಪಾದಿಸುತ್ತಿದ್ದೀರಿ. ಅದನ್ನು ನಾವು ವಿಚಾರಣೆ ನಡೆಸಿ ನಿರ್ಧರಿಸುತ್ತೇವೆ. ಆದರೆ ಮಧ್ಯಾಂತರ ಜಾಮೀನು ಪಡೆಯಲು ನಿಮಗೆ ಅವಕಾಶ ನೀಡುವುದಿಲ್ಲ. ಏಕೆಂದರೆ ಕೆಳಹಂತದ ನ್ಯಾಯಾಲಯ ನಿಮ್ಮನ್ನು ಅಪರಾಧಿ ಎಂದು ಪರಿಗಣಿಸಿದ್ದು, ಹೈಕೋರ್ಟ್ ಕೂಡಾ ಇದನ್ನು ಎತ್ತಿಹಿಡಿದಿದೆ" ಎಂದು ಅರ್ಜಿ ವಜಾ ಮಾಡುವ ಮುನ್ನ ಸಿಜೆಐ ಹೇಳಿದರು.