ಹೃದಯ ಸ್ಟೆಂಟ್ ದರದಲ್ಲಿ ಭಾರೀ ಇಳಿಕೆಯಿಂದ ಉಳ್ಳವರಿಗೆ ಹೊಸ ನೋವು!

ಅಹ್ಮದಾಬಾದ್, ಫೆ.21: ನೀವು ಹೃದ್ರೋಗಿಗಳಾಗಿದ್ದರೆ ಅಕ್ಷರಶಃ ಭಿಕ್ಷುಕರಾಗುತ್ತೀರಿ. ಸಾಮಾನ್ಯ ಹಾಗೂ ಔಷಧ ಸರಬರಾಜು ಸ್ಟೆಂಟ್ ಬೆಲೆಯನ್ನು ಕ್ರಮವಾಗಿ 17 ಸಾವಿರ ಹಾಗೂ 30 ಸಾವಿರಕ್ಕೆ ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ, ಅಧಿಕ ಗುಣಮಟ್ಟದ 3ನೆ ಹಾಗೂ 4ನೆ ಪೀಳಿಗೆಯ ಸ್ಟೆಂಟ್‌ಗಳನ್ನು ಆಸ್ಪತ್ರೆಗಳಿಂದ ವಾಪಾಸು ಪಡೆದಿದ್ದು, ಇದು ಅಧಿಕ ಚಿಕಿತ್ಸಾ ವೆಚ್ಚ ಭರಿಸುವ ಸಾಮರ್ಥ್ಯ ಇರುವ ರೋಗಿಗಳನ್ನು ಚಿಂತೆಗೀಡು ಮಾಡಿದೆ.
ಎಚ್‌ಸಿಜಿ ಆಸ್ಪತ್ರೆಯಲ್ಲಿ ಭಾನುವಾರ ವಿಜಯ್ ಗಧ್ವಿ (68) ಎಂಬ ನಿವೃತ್ತ ಸರಕಾರಿ ಅಧಿಕಾರಿಯನ್ನು ಹೃದಯ ಶಸ್ತ್ರಚಿಕಿತ್ಸೆಗೆ ಗುರಿಪಡಿಸಲಾಯಿತು. ಸ್ಟೆಂಟ್‌ಗಳ ಬೆಲೆಗೆ ಮಿತಿ ವಿಧಿಸಿರುವುದು ತಾರತಮ್ಯದ ಕ್ರಮವಾಗಿದ್ದು, ಉತ್ತಮ ಚಿಕಿತ್ಸೆ ಪಡೆಯುವ ಅವಕಾಶವನ್ನು ಕಿತ್ತುಕೊಂಡಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಸರಕಾರದ ನೀತಿಗಳು ಬಡವರ ಪರವಾಗಿರಬೇಕು. ಆದರೆ ಶ್ರೀಮಂತರ ವಿರುದ್ಧ ತಾರತಮ್ಯ ಮಾಡುವಂತಿರಬಾರದು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಉತ್ತಮ ಸ್ಟೆಂಟ್‌ಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ 2ನೆ ಪೀಳಿಗೆಯ ಸ್ಟೆಂಟ್‌ಗಳನ್ನೇ ಅವರು ಆಯ್ಕೆ ಮಾಡಿಕೊಳ್ಳಬೇಕಾಯಿತು.
ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸ್ಟೆಂಟ್‌ಗಳ ಗರಿಷ್ಠ ಬೆಲೆಯನ್ನು ಮಿತಿಗೊಳಿಸಿರುವುದು ಒಳ್ಳೆಯ ನಿರ್ಧಾರವಾದರೂ, ಶ್ರೀಮಂತ ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುವ ಅವಕಾಶದಿಂದ ಇದು ವಂಚಿಸಿದೆ ಎನ್ನುವುದು ಹೃದ್ರೋಗ ತಜ್ಞರ ಅಭಿಪ್ರಾಯ.
ಗುಣಮಟ್ಟದ ಹೊರತಾಗಿಯೂ ಎಲ್ಲ ಸ್ಟೆಂಟ್‌ಗಳ ಬೆಲೆಯನ್ನು ಮಿತಿಗೊಳಿಸಿರುವುದು, ಹೃದ್ರೋಗಿಗಳ ಗುಣಮಟ್ಟದ ಚಿಕಿತ್ಸೆಗೆ ದೊಡ್ಡ ಹಿನ್ನಡೆಯಾಗಿದೆ. ಉತ್ತಮ ಗುಣಮಟ್ಟದ ಸಾಧನಗಳು ಮಾರುಕಟ್ಟೆಯಿಂದ ಮರೆಯಾಗಿವೆ. ಹೊಸದನ್ನು ಪರಿಚಯಿಸುವ ಸಾಧ್ಯತೆಯೂ ಇಲ್ಲದಾಗಿದೆ. ಒಂದೇ ಒಂದು ನಿರ್ಧಾರದೊಂದಿಗೆ ಸರಕಾರ, ದೇಶದ ಹೃದ್ರೋಗ ಚಿಕಿತ್ಸೆಯನ್ನು ಒಂದು ದಶಕದಷ್ಟು ಹಿಂದಕ್ಕೆ ತಳ್ಳಿದೆ ಎಂದು ಹೃದ್ರೋಗ ತಜ್ಞ ಡಾ.ತೇಜಸ್ ಪಟೇಲ್ ಹೇಳಿದ್ದಾರೆ.