ಅಪಾಯಕ್ಕೆ ಸಿಲುಕಿದ ಜೆಟ್ ಏರ್ ವೇಸ್: ಪೈಲಟ್ ಗಳು ಏನು ಮಾಡುತ್ತಿದ್ದರು ಗೊತ್ತೇ?

ಹೊಸದಿಲ್ಲಿ, ಫೆ.21: ಜೆಟ್ ಏರ್ ವೇಸ್ ಸಂಸ್ಥೆಯ 300 ಪ್ರಯಾಣಿಕರಿದ್ದ ಬೋಯಿಂಗ್ 777 ಮುಂಬೈ-ಲಂಡನ್ ವಿಮಾನ ತನ್ನ ಪ್ರಯಾಣದ ವೇಳೆ ಜರ್ಮನಿ ಮೇಲೆ ಹಾದುಹೋಗುತ್ತಿದ್ದಾಗ ಧಿಡೀರನೆ ವಾಯುಗೋಪುರದ ಸಂಪರ್ಕ ಕಳೆದುಕೊಂಡು ನಂತರ ಜರ್ಮನಿಯ ಜೆಟ್ ಯುದ್ಧ ವಿಮಾನಗಳು ಅವುಗಳನ್ನು ಹಿಂಬಾಲಿಸಿ ಕೊನೆಗೆ ವಿಮಾನದಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿದು ಹಿಂದಿರುಗಿದ ಘಟನೆ ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ವಿಮಾನವು ವಾಯುಗೋಪುರದೊಂದಿಗಿನ ಸಂಪರ್ಕ ಕಡಿದುಕೊಳ್ಳಲು ಕಾರಣವೇನು. ಇಷ್ಟೆಲ್ಲಾ ನಡೆಯುತ್ತಿರುವಾಗ ಅದರ ಪೈಲಟ್ ಗಳು ಏನು ಮಾಡುತ್ತಿದ್ದರು ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ ಇಬ್ಬರು ಪೈಲಟ್ ಗಳಲ್ಲಿ ಒಬ್ಬ ನಿಯಮ ಪ್ರಕಾರ ಅನುಮತಿಸಲಾಗುವ ‘‘ಕಂಟ್ರೋಲ್ಡ್ ರೆಸ್ಟ್’ ನಲ್ಲಿದ್ದರೆ ಇನ್ನೊಬ್ಬ ಪೈಲಟ್ ತಪ್ಪಾದ ಫ್ರೀಕ್ವೆನ್ಸಿಯನ್ನು ಆಯ್ದುಕೊಂಡಿದ್ದರೆನ್ನಲಾಗಿದೆ. ಇದರ ಹೊರತಾಗಿ ಆತನ ಹೆಡ್ ಸೆಟ್ ವಾಲ್ಯೂಮ್ ಕೂಡ ಕಡಿಮೆಯಾಗಿದ್ದರಿಂದ ಜರ್ಮನಿಯ ವಾಯುಗೋಪುರದ ಅಧಿಕಾರಿಗಳು ಆತನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದ್ದರೂ ಸಫಲರಾಗಿರಲಿಲ್ಲ.
ಈ ಬಗ್ಗೆ ಜೆಟ್ ಏರ್ ವೇಸ್ ಸಂಸ್ಥೆ ಪ್ರತಿಕ್ರಿಯಿಸಿದ್ದು ಈ ಘಟನೆಯ ಬಗ್ಗೆ ಸಂಸ್ಥೆ ಹಾಗೂ ವಿಮಾನಯಾನ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಈ ಹಂತದಲ್ಲಿ ಘಟನೆಯ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದೂ ಅದು ಹೇಳಿಕೊಂಡಿದೆ.
ವಿಮಾನದ ಕಾಕ್ ಪಿಟ್ ವಾಯ್ಸ್ ರೆಕಾರ್ಡರನ್ನು ವಿಮಾನ ಲಂಡನ್ ತಲುಪಿದ ಕೂಡಲೇ ಡೌನ್ ಲೋಡ್ ಮಾಡಲಾಗಿದೆಯೇ ಎಂದು ತಿಳಿಯಲು ಸಾಧ್ಯವಾಗಿಲ್ಲ. ಈ ಘಟನೆಗೆ ನಿಜವಾದ ಕಾರಣವೇನೆಂದು ತನಿಖೆಯ ನಂತರವಷ್ಟೇ ತಿಳಿದು ಬರಲಿದೆ.
ಮೂಲಗಳ ಪ್ರಕಾರ ಈ ಜೆಟ್ ಏರ್ ವೇಸ್ ವಿಮಾನ ಸುಮಾರು 33 ನಿಮಿಷಗಳ ತನಕ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಸಮಯದಲ್ಲಿ ವಿಮಾನ ಸುಮಾರು 500 ಕಿಮೀ ದೂರ ಕ್ರಮಿಸಿರಬಹುದು. ಈ ಸಂದರ್ಭ ವಿಮಾನದಲ್ಲಿ ಏನಾಯಿತು ಎಂದು ಕಾಕ್ ಪಿಟ್ ವಾಯ್ಸಿ ರೆಕಾರ್ಡರ್ ಮೂಲಕ ಕಂಡುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.