14 ವರ್ಷದ ಪುತ್ರಿಯನ್ನು ರೂ.7 ಲಕ್ಷಕ್ಕೆ ಮಾರಲು ಯತ್ನಿಸಿದ ಧೂರ್ತ ತಂದೆಯ ಬಂಧನ

ಜೈಪುರ,ಫೆ. 21: ಏಳುಲಕ್ಷರೂಪಾಯಿಗಳಿಗೆ ತನ್ನ ಹದಿನಾಲ್ಕುವರ್ಷದ ಮಗಳನ್ನು ಮಾರಲು ಪ್ರಯತ್ನಿಸಿದ ತಂದೆಯನ್ನು ಮತ್ತು ಖರೀದಿಸಲು ಬಂದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆಲ್‌ವಾರ ಜಿಲ್ಲೆಯ ಬುಟ್ಟೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಊರವರ ಸಮಯೋಚಿತ ಮಧ್ಯಪ್ರವೇಶಿಸಿದ್ದರಿಂದ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರಿಗೆ ಸುಲಭವಾಯಿತು.
ಹರಿಯಾಣದ ಭಿವಾನಿ ಜಿಲ್ಲೆಯ ಮೂವರು ಮದುವೆ ಆಗಲೆಂದು ಬಾಲಕಿಯನ್ನು ಖರೀದಿಸಲು ಗ್ರಾಮಕ್ಕೆ ಬಂದಿದ್ದರು. ಬಾಲಕಿಯ ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು, ದಂಪತಿಯ ಮೂವರು ಮಕ್ಕಳಲ್ಲಿ ಬಾಲಕಿ ಹಿರಿಯವಳಾಗಿದ್ದಾಳೆ. ತಂದೆಗೆ ಏಳು ಲಕ್ಷ ರೂಪಾಯಿ ಕೊಟ್ಟು ಬಾಲಕಿಯನ್ನು ತಂದೆಯ ನೆರವಿನಲ್ಲಿ ಕಾರಿಗೆ ಎತ್ತಿ ಹಾಕುವ ವೇಳೆ ಆಕೆ ಬೊಬ್ಬೆ ಹೊಡೆದಿದ್ದಳು.
ಬಾಲಕಿಯ ಆಕ್ರಂದನ ಕೇಳಿ ಊರವರು ಓಡಿ ಬಂದಿದ್ದರು. ಬಾಲಕಿಯನ್ನು ಕಾರಿಗೆ ಹತ್ತಿಸಲು ಯತ್ನಿಸುತ್ತಿದ್ದ ಆರೋಪಿಗಳನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯಿಂದ ದೂರು ಸ್ವೀಕರಿಸಿದ ಪೊಲೀಸರು ತಂದೆ, ಹಾಗೂ ಖರೀದಿ ಮಾಡಿದ ಮೂವರನ್ನು ಬಂಧಿಸಿದ್ದಾರೆ. ಬಾಲಕಿ ಕೋರಿಕೆಯಂತೆ ಅವಳನ್ನು ಅಜ್ಜಿಯ ಬಳಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆಂದು ವರದಿಯಾಗಿದೆ.