ಗಂಗಾ ಶುದ್ಧೀಕರಣಕ್ಕೆ ಕೊಟ್ಟ ಸಾವಿರಾರು ಕೋಟಿ ರೂ. ಮೋದಿ ಜೇಬಿಗೆ ಹೋಯಿತೆ?
ಉದ್ಧವ್ ಠಾಕ್ರೆ ಪ್ರಶ್ನೆ

ಮುಂಬೈ, ಫೆ.21: ಬಿಎಂಸಿಯಲ್ಲಿ ತನ್ನ ಮಾಜಿ ಮಿತ್ರ ಪಕ್ಷವಾಗಿದ್ದ ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ಮುಂದುವರಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಪ್ರಾಮಾಣಿಕತೆಯನ್ನೇ ಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಬಾಂದ್ರಾಕುರ್ಲಾ ಕಾಂಪ್ಲೆಸ್ ನಲ್ಲಿ ಆಯೋಜಿಸಲಾದ ಜಾಥಾವೊಂದರಲ್ಲಿ ಪ್ರಶ್ನಿಸಿದ್ದಾರೆ.
ಬಿಎಂಸಿಯಲ್ಲಿ ಕಾಲುವೆಗಳ ಹೂಳೆತ್ತುವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಮ್ಮ ಪಕ್ಷದ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಠಾಕ್ರೆ ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಆಪಾದಿಸಿದ್ದಾರೆ.
‘‘ಬಿಎಂಸಿಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಬಿಜೆಪಿ ಹೇಳುತ್ತಿದೆ. ಆದರೆ ನಮಮಿ ಗಂಗಾ ಯೋಜನೆಯಲ್ಲಿ ನಡೆದಿದ್ದೇನು ? ಗಂಗಾ ಶುದ್ಧೀಕರಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಮಂಜೂರಾದರೂ ಶುದ್ಧೀಕರಣವೇನೂ ಆಗಿಲ್ಲ. ಆ ಹಣವೆಲ್ಲ ಎಲ್ಲಿಗೆ ಹೋಯಿತು. ಮೋದಿಯ ಜೇಬಿಗೆ ಹೋಗಿದೆಯೇನು ? ಇಲ್ಲವೇ ಅವರ ರೂ.10 ಲಕ್ಷದ ಸೂಟ್ ಗೆ ಹೋಯಿತೇ?’’ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.
ಬಿಜೆಪಿಯನ್ನು ಶಿಖಂಡಿಗಳ ಪಕ್ಷವೆಂದು ಜರಿದ ಅವರು ‘‘ಶಿವಸೇನೆಯಲ್ಲಿ ಪುರುಷರಿದ್ದಾರೆ, ಶಿಖಂಡಿಗಳಲ್ಲ,’’ಎಂದರು.
ಬಿಎಂಸಿ ಚುನಾವಣೆಯ ಸಂಬಂಧ ತಮ್ಮ ಪಕ್ಷದ ಕೊನೆಯ ರ್ಯಾಲಿಯಲ್ಲಿ ಠಾಕ್ರೆ, ಮೋದಿಯ ಜತೆ ಜತೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಇತರ ಬಿಜೆಪಿ ನಾಯಕರುಗಳಾದ ವೆಂಕಯ್ಯ ನಾಯ್ಡು ಹಾಗೂ ವಿನೋದ್ ತಾವ್ಡೆ ವಿರುದ್ಧವೂ ಕಿಡಿಕಾರಿದರು.