ಜಿಯೋ ಪ್ರೈಮ್ ಆಫರ್ ಘೋಷಿಸಿದ ಮುಖೇಶ್ ಅಂಬಾನಿ

ಮುಂಬೈ, ಫೆ.21: ರಿಲಯನ್ಸ್ ಜಿಯೊದ ಉಚಿತ ಹ್ಯಾಪಿ ನ್ಯೂ ಇಯರ್ ಆಫರ್ ಮಾರ್ಚ್ 31ರಂದು ಕೊನೆಗೊಳ್ಳುತ್ತಿದ್ದಂತೆಯೇ ಜಿಯೊ ಪ್ರೈಮ್ ಆಫರ್ ಜಾರಿಗೆ ಬರುವುದೆಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮಂಗಳವಾರ ಘೋಷಿಸಿದ್ದಾರೆ. ಈ ಹೊಸ ಸದಸ್ಯತ್ವ ಆಫರ್ ಜಿಯೊದ ಆರಂಭಿಕ ಗ್ರಾಹಕರನ್ನು ಗುರಿಯಾಗಿಸಿದ್ದು ಅವರು ಒಂದು ಸಲದ ಶುಲ್ಕವಾಗಿ ರೂ.99 ಪಾವತಿಸಿದಲ್ಲಿ ಮುಂದಿನ 12 ತಿಂಗಳುಗಳ ಕಾಲ ಉಚಿತ ಸೇವೆಗಳನ್ನು ಉಪಯೋಗಿಸಬಹುದಾಗಿದೆ.
ಜಿಯೊಗೆ 170 ದಿನಗಳಲ್ಲಿ 100 ಮಿಲಿಯಕ್ಕೂ ಅಧಿಕ ಗ್ರಾಹಕರು ದೊರೆತಿದ್ದಾರೆಂದು ಹೇಳಿದ ಅಂಬಾನಿ ಇದು ಭಾರತ ಹಾಗೂ ಭಾರತೀಯರ ಸಾಧನೆ ಎಂದು ಹೇಳಿಕೊಂಡರು.
170 ದಿನಗಳ ಪರ್ಯಂತ ಪ್ರತಿ ಸೆಕೆಂಡಿಗೆ ಏಳು ಗ್ರಾಹಕರಂತೆ ಹೊಸ ಗ್ರಾಹಕರ ಸೇರ್ಪಡೆಯಾಗಿದೆ ಎಂದರು. ಯಾವುದೇ ತಾಂತ್ರಿಕ ಕಂಪೆನಿಗೆ ಇಷ್ಟೊಂದು ಬೆಂಬಲ ಸಿಕ್ಕಿದ ಉದಾಹರಣೆಗಳಿಲ್ಲ ಎಂದು ಅವರು ಹೇಳಿಕೊಂಡರು.
ಜನವರಿ 2017ರಲ್ಲಿ ಜಿಯೊ ಗ್ರಾಹಕರು 100 ಕೋಟಿ ಜಿಬಿಗೂ ಅಧಿಕ ಡಾಟಾ ಉಪಯೋಗಿಸಿದ್ದಾರೆ. ಇದನ್ನು ಪರಿಗಣಿಸಿದರೆ ಪ್ರತಿ ದಿನಕ್ಕೆ 3.3 ಕೋಟಿಗೂ ಅಧಿಕ ಜಿಬಿ ಉಪಯೋಗವಾಗಿದೆ. ಮೊಬೈಲ್ ಡಾಟಾ ಉಪಯೋಗದಲ್ಲಿ ಭಾರತ ನಂಬರ್ 1 ದೇಶವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ಹೆಚ್ಚಿನ ಡಾಟಾ ವೀಡಿಯೊ ಆಗಿದ್ದು ಎಂದು ಹೇಳಿದ ಅವರು ಇತರ ದೇಶಗಳಂತೆಯೇ ಭಾರತ ಕೂಡ ಡಾಟಾ ಉಪಯೋಗಿಸಬಲ್ಲುದೆಂದು ಕಳೆದ ಆರು ತಿಂಗಳಲ್ಲಿ ವಿಶ್ವಕ್ಕೆ ತೋರಿಸಿದೆಯೆಂದರು.
ಜಿಯೊ ಟ್ಯಾರಿಫ್ ಪ್ಲಾನುಗಳು ಎಪ್ರಿಲ್ 1ರಿಂದ ಜಾರಿಗೆ ಬರುವುದು ಹಾಗೂ ಯಾವುದೇ ಹಿಡ್ಡನ್ ಚಾರ್ಜಸ್ ಇರುವುದಿಲ್ಲವೆಂದು ಅವರು ತಿಳಿಸಿದರು.
ಮಾರ್ಚ್ 31ರ ಮೊದಲು ಸೇರುವ ಸದಸ್ಯರಿಗೆ ಒಂದು ಸಲದ ಸದಸ್ಯತ್ವ ಶುಲ್ಕವಾಗಿ ರೂ.99 ವಿಧಿಸಲಾಗುವುದು ಇದು ಜಿಯೊ ಪ್ರೈಮ್ ಸದಸ್ಯತ್ವವಾಗುವುದು ಎಂದುಅವರು ಹೇಳಿದರು. ಒಂದು ವರ್ಷದ ನಂತರ ಜಿಯೊ ಪ್ರೈಮ್ ಸದಸ್ಯರು ತಮ್ಮ ಸದಸ್ಯತ್ವವನ್ನು ದಿನಕ್ಕೆ ರೂ. 10 ಅಥವಾ ತಿಂಗಳಿಗೆ ರೂ. 300 ನೀಡಿ ಉಳಿಸಿಕೊಳ್ಳಬಹುದಾಗಿದೆ ಎಂದು ಅಂಬಾನಿ ಮಾಹಿತಿ ನೀಡಿದರು.







