ಅಸ್ಥಿಪಂಜರ, ಶವಗಳ ಜೊತೆ ವಾಸಿಸುತ್ತಿದ್ದ ಟೆಕ್ಕಿಯಿಂದ ಆತ್ಮಹತ್ಯೆ

ಕೊಲ್ಕತ್ತಾ, ಫೆ.21: ತನ್ನ ಸಹೋದರಿ ಹಾಗೂ ನಾಯಿಗಳ ಶವಗಳೊಂದಿಗೆ ಮಾಜಿ ಟೆಕ್ಕಿಯೊಬ್ಬಬದುಕುತ್ತಿದ್ದಾನೆಂದು ಕೊಲ್ಕತ್ತಾ ಪೊಲೀಸರು ಕಂಡುಕೊಂಡು ಒಂದೂವರೆ ವರ್ಷದ ಬಳಿಕ ಆ ವಿಚಿತ್ರ ಮನೋಭಾವದ ವ್ಯಕ್ತಿ - ಪಾರ್ಥೋ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಕ್ಷಿಣ ಕೊಲ್ಕತ್ತಾದ ವಟ್ಗುಂಗೆಯಲ್ಲಿರುವ ತನ್ನ ಐಷಾರಾಮಿ ಅಪಾರ್ಟ್ ಮೆಂಟಿನ ಶೌಚಾಲಯದಲ್ಲಿ ಪಾರ್ಥೋ ಡೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಂದೆ ಅರೊಬಿಂದೋ ಡೇ ಕೂಡ ಇದೇ ರೀತಿಯಾಗಿ ಜೂನ್ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮಗ ಶವಗಳೊಂದಿಗೆ ಬದುಕುತ್ತಿದ್ದಾನೆಂದು ತಿಳಿದು ಅಘಾತಗೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ಇದೀಗ ಪಾರ್ಥೋ ಕೂಡ ಅದೇ ದಾರಿ ಹಿಡಿದಿದ್ದಾನೆಂದು ಅರಿತ ಪೊಲೀಸರು ಆತನ ಅಪಾರ್ಟ್ ಮೆಂಟಿಗೆ ಧಾವಿಸಿದಾಗ ಆತನ ಹೆಣ ಪತ್ತೆಯಾಗಿತ್ತು ಪಕ್ಕದಲ್ಲೇ ಅರ್ಧ ತುಂಬಿದ ಪೆಟ್ರೋಲ್ ಬಾಟಲಿ ಹಾಗೂ ಬೆಂಕಿ ಪೊಟ್ಟಣವಿತ್ತು.
2015ರಲ್ಲಿ ಪಾರ್ಥೋ ತಂದೆ ಆತ್ಮಹತ್ಯೆಗೈದಿದ್ದಾಗ ಆತನ ರಾಬಿನ್ಸನ್ ಸ್ಟ್ರೀಟಿನಲ್ಲಿರುವ ಈಗ ಕೊಲ್ಕತ್ತಾದ ಹಾರರ್ ಹೌಸ್ ಅಥವಾ ಹೌಸ್ ಆಫ್ ಸ್ಕೆಲಿಟನ್ಸ್ ಎಂದು ಕರೆಯಲ್ಪಡುವ ಮನೆಗೆ ಹೋದಾಗ ಆತ ಕನಿಷ್ಠ ಆರು ತಿಂಗಳುಗಳಿಂದ ತನ್ನ ಸಹೋದರಿ ಹಾಗೂ ನಾಯಿಗಳ ಅವಶೇಷಗಳೊಂದಿಗೆ ವಾಸಿಸುತ್ತಿದ್ದನೆಂದು ತಿಳಿದು ಬಂದಿತ್ತು. ಕಾರಣ ಕೇಳಿದಾಗ ತನ್ನ ಸಹೋದರಿ ಹಾಗೂ ನಾಯಿಗಳ ಮೇಲೆ ತನಗೆ ಅತೀವ ಪ್ರೀತಿ ಎಂದಿದ್ದ. ಆತನ ಸಹೋದರಿ ದೆಬ್ಜನಿ ತಾಯಿ ತೀರಿಕೊಂಡ ದುಃಖದಲ್ಲಿ ಉಪವಾಸ ನಡೆಸಿ ಸಾವಿಗೀಡಾಗಿದ್ದಳೆಂದು ನಂತರ ತಿಳಿದು ಬಂದಿತ್ತು.
ಆದರೆ ಆಕೆಯ ದೇಹದಲ್ಲಿ ಯಾವುದೇ ಚರ್ಮವಿಲ್ಲದೇ ಇದ್ದುದರಿಂದ ಪಾರ್ಥೋ ಮಾನವ ಮಾಂಸವನ್ನು ಸೇವಿಸಿದ್ದಿರಬಹುದು ಎಂಬ ಶಂಕೆ ಪೊಲೀಸರಿಗೆ ಬಲವಾಗಿ ಮೂಡಿತ್ತು. ಮಾನಸಿಕ ಅಸ್ವಸ್ಥರ ಆಸ್ಪತ್ರೆಗೆ ಆತನನ್ನು ಸೇರಿಸಲಾಗಿತ್ತಾದರೂ ನಂತರ ಆತನನ್ನು ಅಲ್ಲಿಂದ ಬಿಡುಗಡೆಗೊಳಿಸಲಾಗಿತ್ತು.